ಬಂಗಾಳದ ಸಿಎಂ ಆಗಿ ಮಮತಾ ಬ್ಯಾನರ್ಜಿ ಇಂದು ಪ್ರಮಾಣ

Share

ವಿಧಾನಸಭಾ ಚುನಾವಣೆಯಲ್ಲಿ 213 ಸ್ಥಾನಗಳನ್ನು ಗೆದ್ದು ಬೀಗಿರುವ ಟಿಎಂಸಿ ಬಂಗಾಳದಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದು, ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೊಲ್ಕತ್ತಾ:
ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಸಿಎಂ ಆಗಿ ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೋವಿಡ್ ಕಾರಣದಿಂದ ಕೆಲವು ಆಹ್ವಾನಿತರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಜಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನಾನ್, ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಪ್ರಮಾಣ ವಚನದ ಬಳಿಕ ಸಿಎಂ ಮಮತಾ ನಬನ್ನಾದಲ್ಲಿ ಕೋಲ್ಕತ್ತಾ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಟಿಎಂಸಿ ಶಾಸಕರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥಾ ಚಟರ್ಜಿ ಹೇಳಿದ್ದಾರೆ. ಟಿಎಂಸಿ ಶಾಸಕರು ಹಿಂದಿನ ಸರ್ಕಾರದ ನಿರ್ಗಮಿತ ಸ್ವೀಕರ್ ಬಿಮನ್ ಚಟರ್ಜಿ ಅವರನ್ನೇ ಹಂಗಾಮಿ ಸ್ವೀಕರ್ ಆಗಿ ಆಯ್ಕೆ ಮಾಡಿದ್ದಾರೆ.
ಹೊಸದಾಗಿ ಆಯ್ಕೆಯಾದ ಶಾಸಕರು ಮೇ 6ರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಚಟರ್ಜಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಟಿಎಂಸಿ ಅಧಿಕಾರಕ್ಕೆ ಬಂದಿದ್ದು, ಒಟ್ಟು 292 ವಿಧಾನಸಭಾ ಸ್ಥಾನಗಳ ಪೈಕಿ 213 ಸ್ಥಾನಗಳನ್ನು ಗೆದ್ದುಕೊಂಡಿದೆ. ಟಿಎಂಸಿಯ ಪ್ರಮುಖ ಪ್ರತಿಸ್ಪರ್ಧಿ ಬಿಜೆಪಿ 77 ಸ್ಥಾನಗಳನ್ನು ಪಡೆದುಕೊಂಡಿದೆ.