ಲಾಕ್‌ಡೌನ್‌ : ನಿರುದ್ಯೋಗ ಪ್ರಮಾಣ ಹೆಚ್ಚಳ

Share

ಮುಂಬೈ: ಕೊರೊನಾ ಎರಡನೆಯ ಅಲೆಯ ಪರಿಣಾಮವಾಗಿ  ಲಾಕ್‌ಡೌನಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಹೆಚ್ಚಾಗಿದೆ.  ಶೇಕಡ 8 ರಷ್ಟು ಇದೆ ಎಂದು  ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’ (ಸಿಎಂಐಇ) ಅಂದಾಜಿಸಿದೆ.
ಏಪ್ರಿಲ್ ತಿಂಗಳಿನಲ್ಲಿ 75 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ನಿರುದ್ಯೋಗ ಪ್ರಮಾಣ ಹೆಚ್ಚಲು ಕಾರಣ. ದೇಶದಲ್ಲಿ ಉದ್ಯೋಗದ ಸ್ಥಿತಿಗತಿಯು ಮುಂದಿನ ದಿನಗಳಲ್ಲಿಯೂ ಸವಾಲು ಎದುರಿಸಲಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣವು ಶೇ 9.78ರಷ್ಟು ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ 7.13ರಷ್ಟು ಇದೆ. ಮಾರ್ಚ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ನಿರುದ್ಯೋಗ ಪ್ರಮಾಣವು ಶೇ 6.5ರಷ್ಟು ಇತ್ತು ಎಂದು ಸಂಸ್ಥೆ ಹೇಳಿದೆ.
ಕೋವಿಡ್–19ರ ಎರಡನೆಯ ಅಲೆಯ ಕಾರಣದಿಂದಾಗಿ ದೇಶದ ಹಲವೆಡೆ ಲಾಕ್‌ಡೌನ್‌ ಮಾದರಿಯ ನಿರ್ಬಂಧಗಳು ಜಾರಿಗೆ ಬಂದಿವೆ. ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆರ್ಥಿಕ ಚಟುವಟಿಕೆಗಳ ಮೇಲೆ ನಿರ್ಬಂಧ ಇದೆ.
ಕೋವಿಡ್–19ರ ಎರಡನೆಯ ಅಲೆಯು ಅತ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುವುದು ಯಾವಾಗ ಎಂಬುದು ನನಗೆ ಗೊತ್ತಿಲ್ಲ. ಆದರೆ, ಉದ್ಯೋಗ ಮಾರುಕಟ್ಟೆಯಲ್ಲಿನ ಒತ್ತಡವನ್ನು ನಾನು ಕಾಣಬಲ್ಲೆ ಎಂದು ವ್ಯಾಸ್ ಹೇಳಿದ್ದಾರೆ.