ಉಕ್ರೇನ್​ನಿಂದ ಪಾರಾಗಲು 8 ಕಿ.ಮೀ. ನಡೆದು ಪೋಲೆಂಡ್ ಗಡಿಗೆ ಬಂದ 40 ಭಾರತೀಯ ವಿದ್ಯಾರ್ಥಿಗಳು

Share

ರೊಮೇನಿಯಾ(ಉಕ್ರೇನ್​)ಫೆಬ್ರವರಿ 25: ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಅಲ್ಲಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ತವರನ್ನು ಸೇರಲು ತವಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಮೊದಲ ಬ್ಯಾಚ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್ – ರೊಮೇನಿಯಾ ಗಡಿಗೆ ತೆರಳಿದ್ದಾರೆ. ಈ ಮೂಲಕ ತವರಿಗೆ ಬರಲಿದ್ದಾರೆ.

ಎಂಇಎ ಕ್ಯಾಂಪ್ ಕಚೇರಿಗಳು ಪಶ್ಚಿಮ ಉಕ್ರೇನ್‌ನ ಎಲ್ವಿವ್ ಮತ್ತು ಚೆರ್ನಿವ್ಟ್ಸಿ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ರಷ್ಯನ್ ಮಾತನಾಡುವ ಅಧಿಕಾರಿಗಳನ್ನು ಈ ಶಿಬಿರದ ಕಚೇರಿಗಳಿಗೆ ಕಳುಹಿಸಲಾಗುತ್ತಿದೆ.

8 ಕಿ.ಮೀ. ನಡಿಗೆ: ಎಲ್ವಿವ್‌ನ ಡೇನ್‌ಲೋ ಹ್ಯಾಲಿಟ್‌ಸ್ಕಿ ವೈದ್ಯಕೀಯ ವಿಶ್ವವಿದ್ಯಾಲಯದ ಸುಮಾರು 40 ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ – ಪೋಲೆಂಡ್ ಗಡಿಯತ್ತ ಸಾಗುತ್ತಿದ್ದು, ಗಡಿಯಿಂದ 8 ಕಿಲೋ ಮೀಟರ್ ದೂರದಲ್ಲೇ ವಿದ್ಯಾರ್ಥಿಗಳನ್ನು ಡ್ರಾಪ್​ ಮಾಡಲಾಗಿದೆ. ಇವರೆಲ್ಲ ಇಂದು ಪೊಲೆಂಡ್​ ತಲುಪಲಿದ್ದು, ಅಲ್ಲಿಂದ ಹಂಗೇರಿ ರಾಜಧಾನಿ ಬುಡಾಪೆಸ್ಟ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮರಳಲಿದ್ದಾರೆ.

ಇಲ್ಲಿಂದ ಆಗಮಿಸುವ ಎಲ್ಲ ವಿದ್ಯಾರ್ಥಿಗಳ ಪ್ರಯಾಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲಿದೆ. ಈ ಸಂಬಂಧ ಭಾರತೀಯ ರಾಯಭಾರ ಕಚೇರಿ, ಉಕ್ರೇನ್​, ಹಂಗೇರಿ, ಪೋಲೆಂಡ್​ ಹಾಗೂ ರೊಮೆನಿಯಾ ಸರ್ಕಾರಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ವ್ಯವಸ್ಥೆ ಮಾಡಿದೆ.