ಮತದಾರರ ವಿಶೇಷ ನೋಂದಣಿ ಅಭಿಯಾನ

Share

ಗದಗ: ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಹೆಸರು ಸೇರ್ಪಡೆಗೆ ಹಾಗೂ ಪರಿಷ್ಕರಣೆಗಾಗಿ ಆಯೋಜಿಸಲಾದ ವಿಶೇಷ ನೊಂದಣಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ನಿಯೋಜಿತ ಅಧಿಕಾರಿಗಳು ಅಗತ್ಯದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ವಿಡಿಯೋ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾನುವಾರ ದಿ.13ರಂದು ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಕ್ರಮ ಜರುಗಿಸುವಂತೆ ತಿಳಿಸಿದರು. ಈ ವಿಶೇಷ ಅಭಿಯಾನದಂದು ಮತಗಟ್ಟೆಗಳಿಗೆ ಅನೀರಿಕ್ಷಿತ ಭೇಟಿ ನೀಡಲಿದ್ದು ಈ ಸಂದರ್ಭದಲ್ಲಿ ಬಿ.ಎಲ್.ಓ ಹಾಗೂ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಗೈರಾಗಿದ್ದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ವಿಧಾನ ಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಈ ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ನೋಡೆಲ್ ಅಧಿಕಾರಿಗಳೆಂದು ನಿಯಮಿಸಲಾಗಿದೆ. ನೋಡೆಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕು. ಈ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯದ ಸೂಚನೆಗಳನ್ನು ನೀಡಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು. ಸದಸ್ಯ ಸ್ಥಾನಗಳಿಗೆ ಹರಾಜು ಮಾಡುವದು ಕಂಡುಬಂದಲ್ಲಿ ಅಂತವರ ವಿರುದ್ಧ ದೂರು ದಾಖಲಿಸಲು ಸೂಚಿಸಿದರು.