ಗದಗದಲ್ಲಿ ನಾಳೆಯಿಂದ ಜೂನ್​ 1ರ ವರೆಗೆ ಕಂಪ್ಲೀಟ್ ಲಾಕ್​ ಡೌನ್

Share

ಗದಗ, ಮೇ 27: ನಾಳೆ ಬೆಳಿಗ್ಗೆ 10ಗಂಟೆಯಿಂದ ಜಿಲ್ಲೆಯಲ್ಲಿ ಸ್ಟ್ರಿಕ್ಟ್​ ಲಾಕ್​ ಡೌನ್​ ಜಾರಿಯಾಗಲಿದೆ. ಅಗತ್ಯ ವಸ್ತುಗಳ ಖರೀದಿ ಕೂಡ ಮಾಡಲು ಸಾಧ್ಯವಾಗದಂತಹ ಸಂಪೂರ್ಣ ಲಾಕ್​ ಡೌನ್​ ನಾಳೆಯಿಂದ ಜಾರಿಯಾಗಲಿದೆ.

ಮೇ 27ರ ಬೆಳಿಗ್ಗೆ 10ಗಂಟೆಯಿಂದ ಜೂನ್ 1ರ ಬೆಳಗ್ಗೆ 6ರವರೆಗೆ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗ್ತಿದೆ ಅಂತ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೇ, ಜಿಲ್ಲೆಯಲ್ಲಿ ಎಲ್ಲಾ ಬಗೆಯ ಮಾರುಕಟ್ಟೆಗಳು ಬಂದ್ ಆಗಿರಲಿದೆ,  ತರಕಾರಿ, ಹಣ್ಣು, ಹೂವು ವ್ಯಾಪಾರಸ್ಥರು, ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡಲಷ್ಟೇ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿದೆ. ಜೊತೆಗೆ, ಹಾಲು ಮಾರಾಟ ಮಾಡುವುದಕ್ಕೆ ಮಾತ್ರ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೂ ಅವಕಾಶ ಕಲ್ಪಿಸಲಾಗಿದೆ.

ಇನ್ನೂ, ಕೃಷಿ ಸಂಬಂಧಿತ ಪರಿಕರ, ಬೀಜ ಗೊಬ್ಬರ ಖರೀದಿಗೆ ಬೆಳಿಗ್ಗೆ 10ರವರೆಗೆ ಮಾತ್ರ ಅವಕಾಶವಿರಲಿದ್ದು, ನಗರ ಸೇರಿದಂತೆ ಹಳ್ಳಿಗಳಲ್ಲಿಯೂ ಎಲ್ಲಾ ಬಗೆಯ ಹೋಟೆಲ್​ಗಳನ್ನೂ ಬಂದ್ ಮಾಡಲಾಗಿದೆ. ಬಾರ್ ಹಾಗೂ ವೈನ್ ಶಾಪ್​ಗಳು 1ನೇ ತಾರೀಖಿನವರೆಗೂ ಬಂದ್ ಆಗಿರಲಿದೆ. ಅಲ್ಲದೇ, ಮಾಂಸ ಮಾರಾಟಕ್ಕೂ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ, ಅಂಚೆ ಕಚೇರಿ ಹಾಗೂ ಬ್ಯಾಂಕ್​ಗಳಲ್ಲಿ ಕಚೇರಿ ಕೆಲಸಕ್ಕೆ ಮಾತ್ರ ಅವಕಾಶವಿದ್ದು, ಮದುವೆ ಸೇರಿದಂತೆ ಎಲ್ಲಾ ಬಗೆಯ ಶುಭ ಕಾರ್ಯಗಳಿಗೂ ಕಡಿವಾಣ ಹಾಕಲಾಗುತ್ತೆ ಅಂತ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.