ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

Share

ಹಾವೇರಿ: ಜಿಲ್ಲೆಯಲ್ಲಿ ಶಾಂತಿಯುತ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ಸುರಕ್ಷಾ ಕ್ರಮಗಳೊಂದಿಗೆ ಪಾರದರ್ಶಕ ಚುನಾವಣೆ ನಡೆಸುವ ಕುರಿತಂತೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಸಿದ್ಧತೆಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ 209 ಗ್ರಾಮ ಪಂಚಾಯತಿಗಳ 1,056 ಕ್ಷೇತ್ರಗಳ 2,967 ಸದಸ್ಯ ಸ್ಥಾನಗಳ ಪೈಕಿ ಈಗಾಗಲೇ 224 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ. 2,743 ಸ್ಥಾನಗಳಿಗೆ ಇದೇ ಡಿಸೆಂಬರ್ 22 ಹಾಗೂ ಡಿ.27 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆಯಲ್ಲಿ 5,74,494 ಮತದಾರರು ಹಾಗೂ ಎರಡನೇ ಹಂತದಲ್ಲಿ 4,37,693 ಮತದಾರರು ಒಳಗೊಂಡಂತೆ 10,12,187 ಮತದಾನದಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ 734 ಸೇವಾ ಮತದಾರರು ಸೇರಿದ್ದಾರೆ ಎಂದರು.

ಸುಗಮ ಮತದಾನಕ್ಕಾಗಿ ಜಿಲ್ಲೆಯಲ್ಲಿ 209 ಪಂಚಾಯತಿಗಳಿಗೆ 209 ಚುನಾವಣಾ ಅಧಿಕಾರಿಗಳು, 218 ಸಹಾಯಕ ಚುನಾವಣಾಧಿಕಾರಿಗಳು, 1,379 ಪೊಲೀಸ್ ಆಫೀಸರ್, 1,517 ಪ್ರೊಸಿಡಿಂಗ್ ಆಫೀಸರ್, 4,551 ಪೊಲಿಲಿಂಗ್ ಆಫೀಸ್, 1,379 ಡಿ ಗ್ರೂಪ್ ನೌಕರರು, 7,258 ಆರೋಗ್ಯ ಕಾರ್ಯಕರ್ತರು, 101 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಿದೆ. ಎಲ್ಲ ಅಧಿಕಾರಿಗಳಿಗೆ ಸೂಕ್ತ ತರಬೇತಿಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಮೊದಲ ಹಂತಕ್ಕೆ ಮಂಗಳವಾರ ಮತದಾನ: ಅವಿರೋಧ ಆಯ್ಕೆ ಹೊರತುಪಡಿಸಿ ಮೊದಲ ಹಂತದಲ್ಲಿ ಹಾವೇರಿ, ರಾಣೇಬೆನ್ನೂರು, ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕುಗಳ 675 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. (34 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ) ಹಾವೇರಿಯ 220, ರಾಣೇಬೆನ್ನೂರಿನ 229, ಹಿರೇಕೆರೂರು ಹಾಗೂ ರಟ್ಟಿಹಳ್ಳಿಯ ತಲಾ 113 ಮತಗಟ್ಟೆಗಳಲ್ಲಿ ಮತದಾನ ಜರುಗಲಿದೆ.

ಮೊದಲ ಹಂತದಲ್ಲಿ ಹಾವೇರಿಯ 465 (49 ಅವಿರೋಧ), ರಾಣೇಬೆನ್ನೂರಿಯ 458(33 ಅವಿರೋಧ), ಹಿರೇಕೆರೂರಿನ 228 (32 ಅವಿರೋಧ)ಹಾಗೂ ರಟ್ಟಿಹಳ್ಳಿಯ 216(35 ಸ್ಥಾನಕ್ಕೆ ಅವಿರೋಧ) ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ ಎಂದರು.

ಮೊದಲ ‌ಹಂತದ ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿರುವ ಸಿಬ್ಬಂದಿ

ಸಿಬ್ಬಂದಿ ನಿಯೋಜನೆ: ಸುಗಮ ಮತದಾನಕ್ಕಾಗಿ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ 104 ಮತಗಟ್ಟೆ ಅಧಿಕಾರಿಗಳು, 111 ಸಹಾಯಕ ಮತಗಟ್ಟೆ ಅಧಿಕಾರಿಗಳು, 780 ಪ್ರೋಸಿಡಿಂಗ್ ಆಫೀಸರ್, 2340 ಪೋಲಿಂಗ್ ಆಫೀಸರ್, 709 ಗ್ರೂಪ್ ಡಿ ನೌಕರರು, 1418 ಆರೋಗ್ಯ ಕಾರ್ಯಕರ್ತರು, 54 ಸೆಕ್ಟೆರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.

ಪೊಲೀಸ್ ಬಂದೋಬಸ್ತ್: ಚುನಾವಣೆ ನಡೆಯುವ ಎಲ್ಲ ಮತಗಟ್ಟೆಗಳಲ್ಲಿ ಗರಿಷ್ಠ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ನಾಲ್ಕು ಜನ ಡಿ.ವೈ.ಎಸ್.ಪಿ., 15 ಜನ ಸಿಪಿಐ, 32 ಜನ ಪಿಎಸ್.ಐ, 60 ಜನ ಎ.ಎಸ್.ಐ., 600 ಜನ ಪೇದೆಗಳು ಹಾಗೂ ಮುಖ್ಯ ಪೇದೆಗಳು, ಎಂಟು ಡಿ.ಎ.ಆರ್. ತುಕಡಿಗಳು, ನಾಲ್ಕು ಕೆ.ಎಸ್.ಆರ್.ಪಿ.ತುಕಡಿ ಹಾಗೂ 200 ಜನ ಹೋಂ ಗಾರ್ಡ್‍ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಮುನ್ನೆಚ್ಚರಿಕೆ: ಪ್ರತಿ ಮತಗಟ್ಟೆಗಳಲ್ಲೂ ಕೋವಿಡ್ ಸುರಕ್ಷತೆಗಾಗಿ ಮತಗಟ್ಟೆ, ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಹಾಗೂ ಕೋವಿಡ್ ಸುರಕ್ಷತಾ ಕಿಟ್‍ಗಳನ್ನು ವಿತರಿಸಲಾಗಿದೆ. 106 ವ್ಯಾಕ್ಸ್ ಕಿಟ್, 709 ಕೋವಿಡ್ ಪ್ರೊಟೆಕ್ಸನ್ ಕಿಟ್, 709 ಥರ್ಮಲ್ ಸ್ಕ್ಯಾನರ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮತದಾನ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕನಿಷ್ಠ ಆರು ಅಡಿ ಅಂತರದಲ್ಲಿ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಪ್ರವೇಶ ಮುನ್ನ ಸ್ಕ್ರೀನಿಂಗ್, ಸ್ಯಾನಿಟೈಸರ್‍ನಿಂದ ಕೈ ತೊಳೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕೋವಿಡ್ ಲಕ್ಷಣಗಳು ಕಂಡುಬಂದರೆ ಹಾಗೂ ಈಗಾಗಲೇ ಕೋವಿಡ್ ಪಾಸಿಟಿವ್ ಇದ್ದರೆ ಅವರು ಮತದಾನ ಮಾಡಲು ಇಚ್ಚಿಸಿದರೆ ಸುರಕ್ಷತಾ ಕ್ರಮ, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮತದಾನದ ಕೊನೆಯ ಗಂಟೆಯಲ್ಲಿ ಸಂಜೆ 4 ರಿಂದ 5 ಗಂಟೆವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಕೋವಿಡ್ ಕಿಟ್ ಪೂರೈಸಲಾಗಿದೆ. ಪ್ರತಿ ಮತಗಟ್ಟೆಗೆ ಓರ್ವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯನ್ನು ನಿಯೋಜಿಸಲಾಗಿದೆ. ಪ್ರತಿ ತಾಲೂಕಿಗೆ ಐದರಂತೆ ಮೊಬೈಲ್ ಮೆಡಿಕಲ್ ಟೀಂ ರಚಿಸಲಾಗಿದೆ ಎಂದು ತಿಳಿಸಿದರು.

ಎಡಗೈ ಹೆಬ್ಬಟ್ಟಿಗೆ ಶಾಹಿ: ಮತದಾರರ ಎಡಗೈ ಹೆಬ್ಬಟ್ಟಿಗೆ ಅಳಿಸಲಾರದ ಶಾಹಿಯನ್ನು ಹಾಕಲಾಗುವುದು. ಈ ಉದ್ದೇಶಕ್ಕಾಗಿ 1,418 ಬಾಟಲ್ ಅಳಿಸಲಾರದ ಶಾಹಿಗಳನ್ನು ಮೊದಲ ಹಂತದಲ್ಲಿ ಮತಗಟ್ಟೆಗಳಿಗೆ ಸರಬರಾಜು ಮಾಡಲಾಗಿದೆ ಎಂದು ವಿವರಿಸಿದರು.

ಮತದಾನದ ಅವಧಿ: ಡಿಸೆಂಬರ್ 22 ರ ಮಂಗಳವಾರ ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ಜರುಗಲಿದೆ. ಕೋವಿಡ್ ಸೋಂಕಿತರಿಗೆ ವಿಶೇಷ ಸುರಕ್ಷಾ ಕ್ರಮಗಳೊಂದಿಗೆ ಸಂಜೆ ನಾಲ್ಕರಿಂದ 5 ಗಂಟೆವರೆಗೆ ಮತದಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಎಂಟು ಪ್ರಕರಣ ದಾಖಲು: ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಜಿಲ್ಲೆಯಲ್ಲಿ ಈವರೆಗೆ ಎಂಟು ಪ್ರಕರಣಗಳಿಗೆ ಎಫ್.ಐ.ಆರ್ ದಾಖಲಿಸಲಾಗಿದೆ. ಈ ಎಲ್ಲ ಪ್ರಕರಣಗಳು ಪ್ರಚಾರ ಕಾರ್ಯದಲ್ಲಿ ರಾಜಕೀಯ ಮುಖಂಡರ ಭಾವಚಿತ್ರ, ಪಕ್ಷದ ಚಿಹ್ನೆ ಬಳಸಿ ಪ್ರಚಾರ ಮಾಡಿದ ಕಾರಣಗಳಿಗಾಗಿ ದಾಖಲಾಗಿದೆ. ಪೊಲೀಸ್ ಇಲಾಖೆಯಿಂದ 574 ಶಸ್ತ್ರಾಸ್ತ್ರಗಳ ಪೈಕಿ 106 ವಿನಾಯಿತಿ ಹೊಂದಿವೆ. ಉಳಿದ 468 ಡಿಪಾಜಿಟ್ ಮಾಡಿಕೊಳ್ಳಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಬಂಧಕ ಕ್ರಮಗಳಾದ (107) ಅಡಿ ಒಟ್ಟು 375 ಪ್ರಕರಣಗಳ ಪೈಕಿ 87 ಪ್ರಕರಣಗಳಿಗೆ ಇಂಟೇರಿಯಮ್ ಬಾಂಡ್ ನೀಡಲಾಗಿದೆ. ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಈವರೆಗೆ 1.90 ಲಕ್ಷ ರೂ. ಮೌಲ್ಯದ 305.57 ಲೀಟರ್ ಮದ್ಯ ಹಾಗೂ 6.90 ಲಕ್ಷ ರೂ. ಮೌಲ್ಯದ 19 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಇದ್ದರು.