ಉಕ್ರೇನ್​​ನಲ್ಲಿ ಮೃತಪಟ್ಟಿದ್ದ ನವೀನ್ ಮನೆಗೆ ರಾಜ್ಯಪಾಲ ಗೆಹ್ಲೋಟ್​ ಭೇಟಿ, ತಂದೆ-ತಾಯಿಗೆ ಸಾಂತ್ವನ

Share

ಹಾವೇರಿ, ಮಾರ್ಚ್ 24: ಉಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿ ಇಂದಿಗೆ 30 ದಿನಗಳು ಕಳೆದಿವೆ. ಈ ನಡುವೆ ಉಕ್ರೇನ್​​ನಲ್ಲಿ ಸಿಲುಕಿದ್ದ ಸುಮಾರು 22500 ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವಲ್ಲಿಯೂ ಭಾರತ ಸರ್ಕಾರ ಯಶಸ್ವಿಯಾಗಿದೆ. ಆದ್ರೆ, ದುರದೃಷ್ಟವಶಾತ್ ಒಬ್ಬ ವಿದ್ಯಾರ್ಥಿಯನ್ನ ಭಾರತ ಉಕ್ರೇನ್​​ನಲ್ಲಿ ಕಳೆದುಕೊಂಡಿತ್ತು.

ಮಾರ್ಚ್​​ 1 ರಂದು ಉಕ್ರೇನ್​​ನ ಖಾರ್ಕಿವ್​ನಲ್ಲಿ ರಷ್ಯಾ ನಡೆಸಿದ್ದ ದಾಳಿಯಲ್ಲಿ ಭಾರತೀಯ ಅದ್ರಲ್ಲೂ ಕರ್ನಾಟಕದ ವಿದ್ಯಾರ್ತಿ ನವೀನ್ ಸಾವನ್ನಪ್ಪಿದ್ರು. ಇನ್ನು ರವಿವಾರ ಬೆಳಗಿನ ಜಾವ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಿತ್ತು. ಅವರ ದೇಹವನ್ನು ಎಲ್ಲ ಅಂತಿಮ ವಿಧಿವಿಧಾನದ ಬಳಿಕ ಅವರ ಕುಟುಂಬಸ್ತರು ಆಸ್ಪತ್ರೆಗೆ ದಾನವಾಗಿ ನೀಡಿದ್ರು.

ಉಕ್ರೇನ್​​ನಲ್ಲಿ ಸಾವನ್ನಪ್ಪಿದ್ದ ನವೀನ್ ನಿವಾಸಕ್ಕೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಇಂದು ಭೇಟಿ ಕೊಟ್ಟಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿ ಗ್ರಾಮದಲ್ಲಿರುವ ನವೀನ್ ನಿವಾಸದಲ್ಲಿ ನವೀನ್ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದ್ದು ಮೃತ ನವೀನ್ ತಂದೆ-ತಾಯಿಗೆ ಸಾಂತ್ವನ ಹೇಳಿದ್ದಾರೆ.