ಮುಖ್ಯಮಂತ್ರಿಯಾಗಿ ಯಡಿಯೂರಪ್ಪ: ಜಿಲ್ಲೆಯಲ್ಲಿ ಸಂಭ್ರಮಾಚರಣೆ

Share

ಹಾವೇರಿ: ಬಿಜೆಪಿ ರಾಜ್ಯಾಧಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹಾವೇರಿ ನಗರದಲ್ಲಿ ಸಂಭ್ರಮ ಮುಗಿಲು ಮುಟ್ಟಿತು.

ಜಿಲ್ಲಾ ಬಿಜೆಪಿ ಕಾರ್ಯಾಲಯದ ಮುಂದೆ ಸೇರಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಯಡಿಯೂರಪ್ಪ ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಿತ್ತು. ಆದರೆ, 9 ಸ್ಥಾನಗಳ ಕೊರತೆಯ ಕಾರಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕಾಯಿತು. 14 ತಿಂಗಳ ನಂತರ ಮತ್ತೆ ಅದೃಷ್ಟ ಒಲಿದಿದೆ. ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳಿಗೆ ಚಾಲನೆ ಸಿಗಲಿದೆ. ಅಭಿವೃದ್ಧಿ ಪಥದಲ್ಲಿ ಜಿಲ್ಲೆ ಸಾಗಲಿದೆ ಎಂದು ಬಹುತೇಕ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಿರಂಜನ ಹೆರೂರ, ಡಾ ಸಂತೋಷ ಆಲದಕಟ್ಟಿ, ಪ್ರಭು ಹಿಟ್ನಳ್ಳಿ, ಸತೀಶ ತಿಮ್ಮಣ್ಣನವರ, ವಿವೇಕಾನಂದ, ಪ್ರಕಾಶ ಉಜನಿಕೊಪ್ಪ, ರುದ್ರೇಶ್ ಚಿನ್ನಣ್ಣವರ್, ಸುರೇಶ್ ಹೊಸಮನಿ, ತಿರುಕಪ್ಪ, ವೆಂಕಟೇಶ ದೈವಜ್ಞ, ವಿಜಯಕುಮಾರ್ ಚಿನ್ನಿಕಟ್ಟಿ, ಬಸವರಾಜ ಹಾಲಪ್ಪನವರ ಸೇರಿದಂತೆ ಇತರೆ ಬಿಜೆಪಿ ಕಾರ್ಯಕರ್ತರು ಇದ್ದರು.