ಮಾ.21 ರಂದು ಹಾವೇರಿಯಲ್ಲಿ ರೈತ ಜಾಗೃತಿ ಸಮಾವೇಶ ಹತ್ತು ಸಾವಿರಕ್ಕೂ ಅಧೀಕ ರೈತರು ಭಾಗಿ

Share

ಹಾವೇರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ-ಜನವಿರೋಧಿ ಕಾನೂನುಗಳನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವದಲ್ಲಿ ಮಾ.21 ರಂದು ನಗರದಲ್ಲಿ ರೈತಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸದರಿ ಸಮಾವೇಶದಲ್ಲಿ ಜಿಲ್ಲೆಯ 10ಸಾವಿರಕ್ಕೂ ಅಧಿಕ ರೈತರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಿಸಾನ ಮೋರ್ಚಾ ಹಾಗೂ ಐಕ್ಯ ಹೋರಾಟ ಮತ್ತು ಸಂಯುಕ್ತ ಹೋರಾಟಗಳ ನೇತೃತ್ವದಲ್ಲಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾನುವಾರು ಮಾರುಕಟ್ಟೆಯಿಂದ ಹೈಸ್ಕೂಲ್ ಮೈದಾನದವರೆಗೆ ಮೆರವಣಿಗೆ ನಡೆಯುವುದು ಎಂದು ಅವರು ಹೇಳಿದರು.


ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ಬಲ ತುಂಬಲು “ರೈತ ಜಾಗೃತಿ ಸಮಾವೇಶ”ಗಳನ್ನು ಹಮ್ಮಿಕೊಳ್ಳಲು ರಾಜ್ಯ ರೈತ ಸಂಘ ಹಾಗೂ ಹಸಿರುವ ಸೇನೆ ತೀರ್ಮಾನಿಸಿದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ನಮ್ಮನ್ನಾಳುತ್ತಿರುವ ಸರಕಾರಗಳು ಕೃಷಿಕರನ್ನು ಪ್ರಪಾತಕ್ಕೆ ನೂಕಿವೆ. ಕೃಷಿ ಮಸೂದೆ, ಕೃಷಿ ಉತ್ಪನ್ನ ಮಾರುಕಟ್ಟೆ, ವಿದ್ಯುತ್ ಖಾಸಗಿಕರಣಕ್ಕೆ ಸಂಬಂಧಿಸಿದ ಕಾನೂನುಗಳನ್ನು ಕೋವಿಡ್ ಅಂತಹ ಮಾರಕ ಕಾಯಿಲೆಯಿಂದ ದೇಶ ನಲಗುತ್ತಿರುವ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿ ವಿರೋಧಿ ಮಸೂದೆಗಳನ್ನು ಪಾಸುಮಾಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಗೆ ಸಂಬಂಧಿಸಿದ ಮೂರು ಕರಾಳ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ, ಭೂಮಿ, ಮಾರುಕಟ್ಟೆ, ವಿದ್ಯುತ್ ಎಲ್ಲವನ್ನು ಬಂಡವಾಳಶಾಹಿಗಳ ಪಾಲು ಮಾಡುತ್ತಿದ್ದಾರೆ. ಅನ್ನದಾತರ ತಟ್ಟೆಗೆ ಕೈ ಹಾಕಿದ್ದಾರೆ, ದುಡಿಯುವ ಕೈಗಳನ್ನು ಕಟ್ಟಿ ಹಾಕಲು ಹೊರಟಿದ್ದಾರೆ’ಎಪಿಎಂಸಿ, ಭೂಸುಧಾರಣೆ ಕಾಯ್ದೆ ಹಾಗೂ ವಿದ್ಯುತ್ ವಲಯ ಖಾಸಗೀಕರಣ ಈ ಮೂರು ತಿದ್ದುಪಡಿ ಕಾಯ್ದೆಗಳಿಂದ ದೇಶದ ಶೇ ೭೦ರಷ್ಟು ಜನರ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತದೆ. ದೇಶದ ಆಹಾರ ಸ್ವಾವಲಂಬನೆಯನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರಿಸುವ ಹುನ್ನಾರ ಮಾಡಿದ್ದಾರೆ’ ಎಂದು ಆರೋಪಿಸಿದರು.

ಇಂತಹ ತಿದ್ದುಪಡಿಗಳನ್ನು ವಿರೋಧಿಸಿ ಕೃಷಿಗೆ ಮಾರಕವಾದ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಾಗೂ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಣೆಯಾದಲ್ಲಿ ಅದಕ್ಕಿಂತ ಕಡಿಮೆ ದರದಲ್ಲಿ ರೈತ ಬೆಳೆದ ಬೆಳೆಗಳನ್ನು ವ್ಯಾಪಾರಸ್ಥರು ಖರೀದಿಸದಂತೆ ಭದ್ರವಾದ ಕಾನೂನು ರಚನೆಯಾಗಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ’ರಾಷ್ಟ್ರೀಯ ಕಿಸಾನ ಮೋರ್ಚಾ’ ನೇತೃತ್ವದಲ್ಲಿ ೧೦೦ ದಿನಕ್ಕಿಂತಲೂ ಹೆಚ್ಚು ಕಾಲ ನಿರಂತರ ಪ್ರತಿಭಟನೆ ಮಾಡುತ್ತಿರುವಾಗ ಕೇಂದ್ರ ಸರಕಾರ ಕಾಟಾಚಾರಕ್ಕೆ ಮಾತುಕತೆಗೆ ಆಹ್ವಾನಿಸಿ ಕಣ್ಮರೆಸುವ ತಂತ್ರ ಅನುಸರಿಸಿರುತ್ತದೆ.


ಪ್ರತಿಭಟನೆ ನಿರತ ರೈತರನ್ನು ದೆಹಲಿಗೆ ಪ್ರವೇಶಿಸದಂತೆ ತಡೆದು ಜಲಫಿರಂಗಿ ಉಪಯೋಗಿಸಿ ಬ್ಯಾರಿಕ್ಯಾಡ್‌ಗಳನ್ನು ಅಳವಡಿಸಿ ಲಾಟಚಾರ್ಜ ಸಹ ಮಾಡಿಸಿದ್ದಾರೆ. ಇದೆಲ್ಲವನ್ನು ಗಣನೆಗೆ ತೆಗೆದುಕೊಳ್ಳದೆ ಕೊರೆಯುವ ಚಳಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿರುವಾಗ ಸುಮಾರು ೨೦೦ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಸರಕಾರ ತನ್ನ ಸರ್ವಾಧಿಕಾರಿ ಧೋರಣೆಯಿಂದ ದಕ್ಷಿಣ ಭಾರತದ ರೈತರು ಕೃಷಿ ಮಸೂದೆಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ನಮ್ಮ ಕೆಲವನ್ನು ಇಬ್ಬಾಗ ಮಾಡುತ್ತಿದೆ. ಕಾರಣ ಸಮಗ್ರ ರೈತಕುಲ ಜಾಗ್ರತಗೊಂಡು ಹೋರಾಟದ ಮೂಲಕ ಸರಕಾರದ ಕಣ್ಣುತೆರೆಸಿ ಕೃಷಿಗೆ ಮಾರಕವಾದ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಗುವುದು ಎಂದು ಕೆಂಚಳ್ಳೇರ ತಿಳಿಸಿದರು.


ನಮ್ಮ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಹತ್ತಿ, ಭತ್ತ, ಮತ್ತು ಗೋವಿನಜೋಳಕ್ಕೆ ಬೆಂಬಲ ಬೆಲೆ ನಿಗದಿಯಾಗಿದ್ದರೂ ಸರಕಾರ ಇಲ್ಲಿಯವರೆಗೆ ಖರೀದಿ ಆಂದ್ರ ಪ್ರಾರಂಭಿಸಿರುವುದಿಲ್ಲ. ಮೆಕ್ಕೆಜೋಳ ಬೆಳೆದ ರೈತ ಹತಾಶನಾಗಿದ್ದಾನೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕಂಡುಕಾಣದಂತೆ ಇರುವ ನಮ್ಮ ಜಿಲ್ಲೆಯ ಸಂಸದರು, ಕೃಷಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ತೋಟಗಾರಿಕಾ ಸಚಿವರು ಹಾಗೂ ಶಾಸಕರು ನಿದ್ರೆ ಮಾಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ , ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜವಾಗಿಲ್ಲ. ಸ್ಥಳೀಯ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಶೀರ್ಘದಲ್ಲಿಯೇ ದೆಹಲಿಮಾದರಿಯ ಚಳುವಳಿಯನ್ನು ಆರಂಭಿಸುತ್ತೇವೆ ಎಂದು ಅವರು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರೈತ ಸಾಲಗಾರನಲ್ಲ , ಸರಕಾರವೇ ಬಾಕಿದಾರ. ಹಾವೇರಿಯಲ್ಲಿ ಮಾ.೨೧ರಂದು ನಡೆಯುವ ಬೃಹತ್ ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿ ಮಾಡಿದ ಮಸೂದೆಗಳ ಕುರಿತು ರೈತರಿಗೆ ಮುಂದೆ ಬಂದೊದಗಬಹುದಾದ ಆಪತ್ತುಗಳನ್ನು ಸಂಪೂರ್ಣವಾಗಿ ತಿಳುವಳಿಕೆ ಕೊಟ್ಟು ರೈತರನ್ನು ಜಾಗೃತಗೊಳಿಸಲು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ಅಧ್್ಯಕ್ಷ ರಾಕೇಶ ಐಕಾಯತ್, ಕಾರ್ಯದರ್ಶಿಗಳಾದ ಯದುವೀರ್‌ಸಿಂಗ್ ಮತ್ತು ಪಂಜಾಬ ರಾಜ್ಯದ ಸಂಯುಕ್ತ ಕಿಸಾನ್ ಮೋರ್ಚಾದ ಮುಖ್ಯಸ್ಥರಾದ ಡಾ. ದರ್ಶನ್‌ಪಾಲ್‌ರವರು ಆಗಮಿಸುತ್ತಾರೆ.
ಜೊತೆಗೆ ರಾಜ್ಯದ ರೈತ ಮುಖಂಡರಾದ ಕೆ. ಟಿ. ಗಂಗಾಧರ, ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಕೋಡಿಹಳ್ಳಿ ಚಂದ್ರಶೇಖರ, ಬಡೆಗಲ್‌ಪುರ ನಾಗೇಂದ್ರ, ಚಾಮರಸ ಮಾಲಿಪಾಟೀಲ, ಕುರುಬೂರು ಶಾಂತಕುಮಾರ, ಕೆ. ಸಿ. ಬಯ್ಯಾರೆಡ್ಡಿ, ಹಾಗೂ ಸಾಮಾಜಿಕ ಹೋರಾಟಗಾರರಾದ ಎಸ್. ಆರ್. ಹಿರೇಮಠ ಮುಂತಾದವರು ಭಾಗವಹಿಸುವರು ಜಿಲ್ಲೆಯ ಸಮಸ್ತ ರೈತ ಭಾಂದವರು, ರೈತ ಕಾರ್ಮಿಕರು, ಮಹಿಳಾ ಕಾರ್ಮಿಕರು ವಿವಿಧ ಮಹಿಳಾ ಹಾಗೂ ಪುರುಷ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಪ್ರಗತಿಪರ ಚಿಂತಕರು, ವಿವಿಧ ಪ್ರಗತಿಪರ ಸಂಘಟನೆಗಳು ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಗೆ ಶಕ್ತಿ ತುಂಬಲು ಸರಕಾರ ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ, ಬೃಹತ್ ರೈತ ಸಮಾವೇಶ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರಾದ ದೀಪಕ್ ಗಂಟಿಸಿದ್ದಪ್ಪನವರ, ಗಂಗಣ್ಣ ಯಲಿ, ಸುರೇಶ ಚಲವಾದಿ, ಹನುಂತಪ್ಪ ಹುಚ್ಚಣ್ಣನವರ, ಶಂಕ್ರಣ್ಣ ಶಿರಗಂಬಿ, ಶಿವಬಸಪ್ಪ ಗೋವಿ ಸೇರಿದಂತೆ ಅನೇಕರು ಹಾಜರಿದ್ದರು.