ಹಾವೇರಿ: 10 ಟ್ರೈನಿ ಸಿಬ್ಬಂದಿ ವಜಾ

Share

ಹಾವೇರಿ: ಸಾರಿಗೆ ಮುಷ್ಕರವನ್ನು ಬೆಂಬಲಿಸಿ, ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ 10 ಟ್ರೈನಿ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ ಹಾಗೂ ಹಾವೇರಿ ವಿಭಾಗದ 38 ನೌಕರರನ್ನು ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡುವ ಮೂಲಕ ಮುಷ್ಕರ ನಿರತ ಸಿಬ್ಬಂದಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಿಸಿ ಮುಟ್ಟಿಸಿದೆ.

ಐದು ದಿನಗಳ ಹಿಂದೆ, ಹಾವೇರಿ ವಿಭಾಗದಿಂದ 38 ನೌಕರರನ್ನು ಬೇರೆ ವಿಭಾಗಗಳಿಗೆ ಹಾಗೂ ಹಾವೇರಿ ವಿಭಾಗೀಯ ಕಚೇರಿಯಿಂದ 17 ಆಡಳಿತಾತ್ಮಕ ಸಿಬ್ಬಂದಿಯನ್ನು ಜಿಲ್ಲೆಯ ಇತರ ಡಿಪೊಗಳಿಗೆ ವರ್ಗಾವಣೆ ಮಾಡಲಾಗಿತ್ತು. ಈಗ ಮತ್ತೆ 38 ನೌಕರರನ್ನು ವರ್ಗಾವಣೆ ಮಾಡಿರುವುದು ಮುಷ್ಕರ ನಿರತ ಸಾರಿಗೆ ನೌಕರರಿಗೆ ತಲೆ ಬಿಸಿಯಾಗಿದೆ.

‘ಜಿಲ್ಲೆಯಲ್ಲಿ 64 ಸಾರಿಗೆ ಬಸ್‌ಗಳು ಸಂಚಾರ ನಡೆಸಿದವು. ಬಸ್‌ ಸಂಚಾರಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗಿಲ್ಲ. ಶುಕ್ರವಾರ 130 ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಸಮರ್ಪಕವಾಗಿ ಬಸ್‌ ಕಾರ್ಯಾಚರಣೆ ಮಾಡಿಲ್ಲ ಎಂದರೆ, ಆಯಾ ಘಟಕ ವ್ಯವಸ್ಥಾಪಕರ ತಲೆದಂಡವಾಗಲಿದೆ ಎಂದು ವಾ.ಕ.ರ.ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ’ ಎಂದು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಹೇಳಿದರು.

ಸಾರಿಗೆ ಮುಷ್ಕರ 10 ದಿನಗಳನ್ನು ಪೂರೈಸಿದ್ದು, ಖಾಸಗಿ ಬಸ್‌ ಮತ್ತು ಮ್ಯಾಕ್ಸಿಕ್ಯಾಬ್‌ಗಳ ಸಂಚಾರ ಮುಂದುವರಿದಿದೆ. ಪೂರ್ಣ ಪ್ರಮಾಣದಲ್ಲಿ ಸಾರಿಗೆ ಬಸ್‌ಗಳು ಸಂಚಾರ ಆರಂಭವಾಗದೇ ಇರುವುದರಿಂದ ನಿಗದಿತ ವೇಳೆಯಲ್ಲಿ ಊರುಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಖಾಸಗಿ ಮತ್ತು ಮ್ಯಾಕ್ಸಿಕ್ಯಾಬ್‌ಗಳ ಸಂಚಾರ ಎಲ್ಲ ಮಾರ್ಗಗಳಿಗೂ ಸಮಪರ್ಕವಾಗಿಲ್ಲ ಎಂದು ಪ್ರಯಾಣಿಕರು ದೂರಿದರು.