ಎಲ್ಐಸಿ ಜೀವನ ಸರಳ ಪಾಲಿಸಿ ಹೆಚ್ಚುವರಿ ಮೊತ್ತ ಪಾವತಿಗೆ ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶ

Share

ಹಾವೇರಿ: ಪಾಲಿಸಿ ಮಾಡಿಸುವ ಸಂದರ್ಭದಲ್ಲಿ ಹೇಳಿದ ಹೆಚ್ಚುವರಿ ವಿಮಾ ಮೊತ್ತವನ್ನು ಪಾಲಿಸಿದಾರನಿಗೆ ಪಾವತಿಸುವಂತೆ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಸವಣೂರ ಪಟ್ಟಣದ ನಿವೃತ್ತ ಸರ್ಕಾರಿ ನೌಕರ ವಿಷ್ಣುರಾವ ಭುಜಂಗರಾವ ಕುಂಠೆ ಅವರು ತಮ್ಮ 58ನೇ ವಯಸ್ಸಿನಲ್ಲಿ ಜೀವನ ಸರಳ ಪಾಲಸಿಯನ್ನು ವಾರ್ಷಿಕ ₹ 48,080 ಗಳಂತೆ 10 ವರ್ಷಗಳ ಅವಧಿಗೆ ತುಂಬಿದ್ದು, ಪಾಲಿಸಿ ಮೆಚ್ಯುರಿಟಿಯಾದ ನಂತರ ಮೆಚ್ಯುರಿಟಿ ಹಣ 1,89,760 ಹಾಗೂ ಬೋನಸ್ 10 ಲಕ್ಷ ರೂ. ಸೇರಿ ನೀಡುವುದಾಗಿ ಎಲ್ಐಸಿ ಏಜೆಂಟರು ತಿಳಿಸಿದ್ದರು. ಆದರೆ ಪಾಲಿಸಿ ಮೆಚ್ಯುರಿಟಿ ನಂತರ ₹ 2,70,407 ಮಾತ್ರ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಪಾಲಿಸಿದಾರರು 4,80,400 ರೂ.ಗಳನ್ನು ವಿಮಾ ಕಂಪನಿಗೆ 10ವರ್ಷ ವಿಮಾ ಕಂತನ್ನು ತುಂಬಿದ್ದಾರೆ. ಕಾರಣ ತಮಗೆ ಬರಬೇಕಾದ ಪಾಲಿಸಿ ಮೊತ್ತವನ್ನು ಪಡೆಯಲು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸೆಪ್ಟೆಂಬರ್-2019ರಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯೆ ಮಹೇಶ್ವರಿ ಬಿ.ಎಸ್. ಅವರು ಪಾಲಿಸಿದಾರರು ₹ 4,80,400 ರೂ.ಗಳನ್ನು ವಿಮಾ ಕಂಪನಿಗೆ ತುಂಬಿ ₹ 2,70,407 ಪಡೆಯಲು ಒಪ್ಪುತ್ತಿರಲಿಲ್ಲ. ಹಾಗಾಗಿ ವಿಮಾ ಕಂಪನಿ ಹಾಗೂ ಏಜೆಂಟರೂ ಸೇರಿ ವಿಮಾ ಪಾಲಿಸಿ ಮಾಹಿತಿ ಮುಚ್ಚಿಟ್ಟು ಪಾಲಿಸಿ ನೀಡಿರುವುದು ಸ್ಪಷ್ಟವಾಗಿದೆ. ಪಾಲಿಸಿ ಟೇಬಲ್‌ನಂತೆ ಮಾಹಿತಿ ನೀಡಬೇಕಾಗುವುದು ವಿಮಾ ಕಂಪನಿಯ ಕರ್ತವ್ಯವಾಗಿದೆ. ಪಾಲಿಸಿ ಟೇಬಲ್‌ನ್ನು ಗ್ರಾಹಕನಿಗೆ ನೀಡದಿರುವುದು ಸ್ಪಷ್ಟವಾಗಿದೆ. ಮೂಲ ಪ್ರಪೋಸಲ್ ಫಾರಂ ಪ್ರಕಾರವೇ ಪಾಲಿಸಿಯನ್ನು ನೀಡಬೇಕು.

ದೂರು ನೀಡಿದ ಗ್ರಾಹಕನು ಡಿ. 23, 2019 ರಂದು ಮರಣ ಹೊಂದಿದ ಕಾರಣ ವಾರಸುದಾರರಾದ ಅವರ ಪತ್ನಿ ಮತ್ತು ಮಗ ಪ್ರಕಣದಲ್ಲಿ ಭಾಗಿಯಾಗಿದ್ದಾರೆ. ವಿಮಾ ಕಂಪನಿಯು ದಿವಂಗತರ ಮೊದಲನೆ ವಾರಸುದಾರಳಿಗೆ ಬರಬೇಕಾದ ಪಾಲಿಸಿ ಮೊತ್ತ ₹ 11,89,760 ರಲ್ಲಿ ವಿಮಾ ಕಂಪನಿ ಈಗಾಗಲೇ ನೀಡಿದ ₹ 2,70,407 ಗಳನ್ನು ವಜಾಮಾಡಿಕೊಂಡು ಉಳಿದ ₹ 9,19,353 ೯ನ್ನು ವಾರ್ಷಿಕ 6ರ ಬಡ್ಡಿ ಸಹಿತ ದೂರು ದಾಖಲಿಸಿದ ದಿನದಿಂದ ನೀಡಬೇಕು. ಏಜೆಂಟನು ಪ್ರಕರಣದ ಖರ್ಚು ಮತ್ತು ಮಾನಸಿಕ ತೊಂದರೆಗಾಗಿ 5 ಸಾವಿರ ರೂ. ನೀಡಲು ಹಾಗೂ ಇದಕ್ಕೆ ತಪ್ಪಿದಲ್ಲಿ ಶೇ.12ರಷ್ಟು ವಾರ್ಷಿಕ ಬಡ್ಡಿ ಸಮೇತ ಪಾವತಿಸಲು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ಅವರು ತಿಳಿಸಿದ್ದಾರೆ.