ಮಗುವಿಗೆ ಅಕ್ಷರ ಜ್ಞಾನದೊಂದಿಗೆ ಜೀವನದ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ: ಬಸವಶಾಂತಲಿಂಗ ಶ್ರೀ

Share

ಹಾವೇರಿ: ಪ್ರಾಥಮಿಕ ಶಿಕ್ಷಣ ಮಗುವಿನ ಜೀವನದ ತಳಪಾಯವಾಗಿದ್ದು, ಅಕ್ಷರ ಜ್ಞಾನದೊಂದಿಗೆ ಜೀವನದ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಬಸವ ಕೇಂದ್ರ ಹೊಸಮಠದ ಬಸವಶಾಂತಲಿಂಗ ಶ್ರೀ ಹೇಳಿದರು.

ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ 2018-19 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಮೂಲಕ ಸಮಾಜದಲ್ಲಿ ಉತ್ತಮವಾಗಿ ಬೆಳವಣಿಗೆ ಹೊಂದಲು ನೆರವಾಗುತ್ತದೆ. ಶಿಕ್ಷಕ ತನ್ನ ವಿದ್ಯಾರ್ಥಿ ಹೊಸ ಬೆಳಕನ್ನು ನೀಡುವ ಹಾಗೂ ನಾಯಕತ್ವ ಗುಣದೊಂದಿಗೆ ಸಂಸ್ಥೆಗೆ ಉತ್ತಮವಾದ ಹೆಸರನ್ನು ತರಬೇಕೆಂದು ಆಸೆ ಪಡುತ್ತಾನೆ. ಪ್ರಶಿಕ್ಷಣಾರ್ಥಿಗಳೆಲ್ಲ ತರಬೇತಿ ಮುಗಿದ ಬಳಿಕ ಜ್ಞಾನದ ಮರವಾಗಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಆಶಿಸಿದರು.

ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಮಾತನಾಡಿ, ಒಂದು ದೇಶ ಅಭಿವೃದ್ಧಿಯತ್ತ ಮುನ್ನಡೆಯಬೇಕಾದೆ ಶಿಕ್ಷಕ ಹಾಗೂ ಶಿಕ್ಷಣ ಉತ್ತಮವಾಗಿ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ನಿರಂತರ ಓದು ಶಿಕ್ಷಕರಿಗೆ ಕೈಕನ್ನಡಿಯಾಗಿದ್ದು, ಅವರಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಶಿಕ್ಷಣವನ್ನು ಶಿಕ್ಷಕರು ನೀಡಬೇಕು ಎಂದರು.

ಬಸವ ಕೇಂದ್ರ ಹೊಸಮಠದ ಆಡಳಿತ ಸದಸ್ಯ ನಾಗೇಂದ್ರ ಕಟಗೋಳ ಮಾತನಾಡಿ, ಇಂದು ಮಕ್ಕಳಿಗೆ ಪ್ರಾಥಮಿಕವಾಗಿ ಅಕ್ಷರಭ್ಯಾಸ ಮಾಡಿಸುವ ಶಿಕ್ಷಕರಿಗೆ ವೇತನ ಕಡಿಮೆ ಇದ್ದರೂ ಅವರ ಜವಾಬ್ದಾರಿ ಸಮಾಜದಲ್ಲಿ ಹೆಚ್ಚಿದೆ ಎಂದರು.

ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ 2018-19 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿ, ಪತ್ರಕರ್ತ ಮಂಜುನಾಥ ಗುಡಿಸಾಗರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ, ಪತ್ರಕರ್ತ ಮಂಜುನಾಥ ಗುಡಿಸಾಗರ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಮಾಲತೇಶ ಕುಲಕರ್ಣಿ, ಉಪನ್ಯಾಸಕರಾದ ಎಚ್.ಜಿ. ಮುಳಗುಂದ, ಎಂ.ಕೆ. ಮತ್ತಿಹಳ್ಳಿ, ಎಸ್.ಎಮ್. ತೆಂಗಿನಕಾಯಿ, ಎಸ್.ಯು. ಕುರಂದವಾಡ, ಪ್ರಧಾನ ಕಾರ್ಯದರ್ಶಿ ಕಾರ್ತಿಕ ಹೂಗಾರ, ಮಹಿಳಾ ಪ್ರತಿನಿಧಿ ಸುಮಂಗಲಾ ಹಂಜಿ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು.