ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ವಿಷಾದರಕ ಸಂಗತಿ: ನ್ಯಾಯಾಧೀಶ ಕಿರಣ್ ಕಿಣಿ

Share

ಹಾವೇರಿ: ಸಮಾಜದಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ  ಪ್ರತಿ ಹೆಣ್ಣು ಮಕ್ಕಳಿಗೆ ಪೋಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಕಿಣಿ ಅವರು ಹೇಳಿದರು.

ಗುರುವಾರ ನಗರದ ಕೆ.ಎಲ್.ಇ ಸೊಸೈಟಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ  ಸಂಘ, ಅಭಿಯೋಜನಾ ಇಲಾಖೆ, ಜಿಲ್ಲಾ ಆಡಳಿತ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ  ಕೆ.ಎಲ್.ಇ ಸೊಸೈಟಿಯ ಆಂಗ್ಲ ಮಾಧ್ಯಮ ಶಾಲೆ ಆಶ್ರಯದಲ್ಲಿ  ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಸಂರಕ್ಷಣಾ ಕಾಯ್ದೆ  2015 ಹಾಗೂ ಪೋಕ್ಸ ಕಾಯ್ದೆ 2012 ಕುರಿತು ಆಯೋಜಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಕೆಟ್ಟ ಸ್ಪರ್ಶ ಹಾಗೂ ಒಳ್ಳೆಯ ಸ್ಪರ್ಶದ ಬಗ್ಗೆ  ತಿಳಿಸಬೇಕು, ಮಕ್ಕಳೊಂದಿಗೆ ಯಾರಾದರು ಅಸಭ್ಯವಾಗಿ ನಡೆದುಕೊಂಡರೆ ಧೃತಿಗೆಡದೆ ಪಾಲಕರು ಹಾಗೂ ಸಂಬಂಧಪಟ್ಟವರಿಗೆ ತಿಳಿಸಿಬೇಕು. ಪೋಕ್ಸೊ ಕಾಯ್ದೆಯಡಿ ಅಂತವರ ವಿರುಧ್ಧ ಕಾನೂನು ಕ್ರಮ ಜರುಗಿಸಲಾಗುವುದು.  ಇಂದಿನ ಮಕ್ಕಳೆ  ಮುಂದಿನ ನಮ್ಮ ದೇಶ ಕಟ್ಟುವ ಭದ್ರ ಬುನಾದಿಗಳಾಗಿದ್ದಾರೆ. ಅವರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಮಕ್ಕಳು ಶಾಲಾ -ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಹಾಗೂ ಇತರೆ ಕಾಯ್ದೆಗಳ ಕುರಿತು ಗುಂಪು ಚರ್ಚೆಗಳನ್ನು ಮಾಡಬೇಕು. ಇದರಿಂದ  ಹೆಚ್ಚಿನ ಮಾಹಿತಿ ಹಾಗೂ ಕಾನೂನಿನ ಅರಿವು ಮೂಡುತ್ತದೆ ಎಂದು ಹೇಳಿದರು

ಡಿ.ವೈ.ಎಸ್.ಪಿ.ಕುಮಾರಪ್ಪ ಅವರು ಮಾತನಾಡಿ, ಅಪ್ರಾಪ್ತ ವಯಸ್ಸಿನವರ ಮೇಲೆ ಆಗುವ ಲೈಂಗಿಕ ದೌರ್ಜನ್ಯಗಳು ಕೆಲವು ಬೆಳಕಿಗೆ ಬರುತ್ತವೆ, ಕೆಲವು ಇತರರ ಪ್ರಭಾವಕ್ಕೆ ಒಳಗಾಗಿ ಮರಿಚೀಕೆಯಾಗುತ್ತಿವೆ. ಪೋಕ್ಸೋ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಜಾಮೀನು ಇರುವುದಿಲ್ಲ ಎಂದು ಹೇಳಿದರು

ವಕೀಲ ಬಸವರಾಜ ಜಿ.ಭಂಗೆ, ಜಿಲ್ಲಾ ಪೊಲೀಸ್ ಕಾರ್ಯಲಯದ ಅಧಿಕಾರಿ ಎಮ್.ಆರ್ ಜಾಲಗಾರ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀವಿದ್ಯಾ, ಸರಕಾರಿ ಹಿರಿಯ ಅಭಿಯೋಜಕಿ ಸುನಂದಾ ಮಡಿವಾಳರ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ರಾಮಕೃóಷ್ಣ ಪಡಗಣ್ಣನವರ. ಜಿಲ್ಲಾ ಮಕ್ಕಳ ಇಲಾಖೆ ರಕ್ಷಾಣಾಧಿಕಾರಿ ಮಲ್ಲಿಕಾರ್ಜುನ ಮಠದ, .ಕೆ.ಎಲ್.ಇ.ಸೊಸೈಟಿ ಆಂಗ್ಲ ಮಾಧ್ಯಮಶಾಲೆಯ ಪ್ರಾಂಶುಪಾಲೆ ಸ್ವಪ್ನಾ.ಆರ್.ಲೋಬೋ ಹಾಗೂ ಇತರರು ಇದ್ದರು.