ಕ್ರೀಡಾ ಉತ್ತೇಜನಕ್ಕೆ ಸರ್ಕಾರದಿಂದ ಹಲವು ಸೌಲಭ್ಯ: ಶಾಸಕ ನೆಹರು ಓಲೇಕಾರ

Share

ಹಾವೇರಿ: ಕ್ರೀಡಾ ಉತ್ತೇಜನಕ್ಕೆ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡಬೇಕು ಎಂದು ಶಾಸಕ ನೆಹರು ಓಲೇಕಾರ ಅವರು ಕರೆ ನೀಡಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತಮ ಜೀವನಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡಾ ಚಟುವಟಿಕೆಗಳು ಅಷ್ಟೇ ಮುಖ್ಯವಾಗಿವೆ. ಕ್ರೀಡಾ ಚಟುವಟಿಕೆಗಳನ್ನು ಬದುಕಿನ ಮುಖ್ಯಭಾಗವಾಗಿ ಶಿಕ್ಷಣದ ಜೊತೆಗೆ ಆಟೋಟಗಳನ್ನು ಕಲಿಯುತ್ತಾ ಹೋಗಬೇಕು. ಯಾವುದೇ ಕಲಿಕೆಯಲ್ಲಿ ನಿರಂತರ ಅಭ್ಯಾಸ ಮುಖ್ಯ. ನಿರಂತರ ಕ್ರೀಡಾ ಚಟುವಟಿಕೆಗಳು ಯುವಕರಲ್ಲಿ ಶಿಸ್ತು ಸಂಯಮವನ್ನು ತರುತ್ತದೆ ಎಂದು ಹೇಳಿದರು.

ಕ್ರೀಡೆಯಲ್ಲಿ ಸಾಧನೆಮಾಡಲು ಒಂದಿಲ್ಲ ಒಂದು ಆಟದಲ್ಲಿ ಪರಿಣಿತಿ ಹೊಂದಲು ನಿತ್ಯವೂ ಅಭ್ಯಾಸಮಾಡಿಕೊಂಡು ಸಾಧನೆಮಾಡಲು ಹಾಗೂ ನಿಮ್ಮ ಕ್ರೀಡಾ ಸಾಮಥ್ರ್ಯ ತೋರಲು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೀರಿ. ಈ ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ ಗೆಲ್ಲುವುದರ ಮೂಲಕ ಜಿಲ್ಲೆಯ ಕೀರ್ತಿಯನ್ನು ತನ್ನಿ ಎಂದು ಹಾರೈಸಿದರು.

ಕ್ರೀಡಾಬಾವುಟ ಅನಾವರಣಗೊಳಿಸಿ ಪರಿವಾಳವನ್ನು ಹಾರಿಬಿಟ್ಟ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಗೆದ್ದವರು ಬೀಗದೆ ಸೋತವರು ಅಳುಕದೇ ಮುಂದಿನ ಸ್ಪರ್ಧೆಗಳಿಗೆ ಸಜ್ಜಾಗಬೇಕು. ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಂದು ಸಲಹೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಾಲೂಕು ಪಂಚಾಯತಿ ಶಿಗ್ಗಾಂವ ತಾಲೂಕು ಪಂಚಾಯತಿ ಅಧ್ಯಕ್ಷ ತಿಮ್ಮಣ್ಣ ತಿಮ್ಮಣ್ಣನವರ, ಸವಣೂರ ತಾ.ಪಂ.ಅಧ್ಯಕ್ಷ ಪುಟ್ಟಪ್ಪನವರ, ಸದಸ್ಯರಾದ ಪಕ್ಕೀರಗೌಡರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಾಕೀರ ಅಹ್ಮದ್, ರಾಜ್ಯ ಬ್ಯಾಡ್ಮಿಂಟನ್ ಅಸೋಷಯೇಷನ್ ಅಧ್ಯಕ್ಷ ಶಿವರಾಜ, ರಮೇಶ, ಪ್ರಶಾಂತ ಇತರರು ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಪಟುಗಳು ಭಾಗವಹಿಸಿದ್ದರು.