ಫೆ. 16ಕ್ಕೆ ಗಣಮೇಳ, ಸರ್ವಶರಣರ ಸಮ್ಮೇಳನ: ಬಸವಶಾಂತಲಿಂಗ ಶ್ರೀ

Share

ಹಾವೇರಿ: ಜಾಗತಿಕ ಶಾಂತಿ, ಪ್ರಗತಿಗಾಗಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ, ಬಸವ ಕೇಂದ್ರಗಳು, ಬಸವ ಸಂಘಟನೆಗಳು, ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ಸರ್ವಜನಾಂಗದ ಮಠಾಧೀಶರ ಸಹಯೋಗದಲ್ಲಿ ಬೆಂಗಳೂರಿನ ನಂದಿ ಗ್ರೌಂಡ್ಸ್ ನಲ್ಲಿ ಫೆ. 16 ರ ಭಾನುವಾರ ಜರಗುವ ಶಿವಯೋಗ ಸಂಭ್ರಮ ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಹೊಸಮಠದ ಬಸವಶಾಂತಲಿಂಗ ಶ್ರೀ ಬಿಡುಗಡೆಗೊಳಿಸಿದರು.

ನಗರದ ಬಸವಕೇಂದ್ರ ಹೊಸಮಠದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಘ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಲಿದ್ದು, ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆರವರು, ರವಿಶಂಕರ ಗುರೂಜಿ, ರಾಜ್ಯಮಟ್ಟದ ಧಾರ್ಮಿಕ ಮುಖಂಡರು, ಸಂತರು ಸ್ವಾಮಿಗಳಲ್ಲದೆ ಜನಾಯಕರು, ಚಿಂತಕರು, ಕಲಾವಿದರು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬರುವ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಸಮಾವೇಶಗೊಂಡಿದ್ದರೆಂಬುದು ಒಂದು ಇತಿಹಾಸ. ಅದೇ ರೀತಿ 21 ನೇ ಶತಮಾನದಲ್ಲಿ ಅಂತಹ ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ ಫೆ.16 ರ ಭಾನುವಾರ ಅಸಂಖ್ಯ ಪ್ರಮಥ ಗಣಮೇಳ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

https://youtu.be/aoor0qVIGOA

ನಮ್ಮ ಕಾರ್ಯಕ್ರಮ ಜಾತ್ಯತೀತ, ಪಕ್ಷಾತೀತವಾಗಿದ್ದು, ಬಸವಣ್ಣ ಅವರ ಆಶಯದಂತೆ ಈ ಗಣಮೇಳವನ್ನು ಆಯೋಜಿಸಲಾಗಿದ್ದು, ಒಟ್ಟು ಎರಡು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನೀರಿಕ್ಷೆ ಇದೆ. ಅಂದು ಬೆಳಗ್ಗೆ 8 ಗಂಟೆಗೆ ಜರಗುವ ಶಿವಯೋಗ ಸಂಭ್ರಮದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿಯಾಗಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ಐದನೂರಕ್ಕೂ ಹೆಚ್ಚು ಭಕ್ತರು ಬೆಂಗಳೂರು ಕಾರ್ಯಕ್ರಮಕ್ಕೆ ಬಸ್ ಹಾಗೂ ರೈಲು ಮೂಲಕ ಆಗಮಿಸಲಿದ್ದಾರೆ. ಅಂದು 1.30 ಗಂಟೆಗೆ ಅಸಂಖ್ಯ ಪ್ರಮಥ ಗಣಮೇಳ, ಮಧ್ಯಹ್ನಾ 1.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ನೆಹರು ಓಲೇಕಾರ ಮಾತನಾಡಿದರು. ಈ ಸಂದರ್ಭದಲ್ಲಿ ರಾಣೆಬೆನ್ನೂರ ವಿರಕ್ತ ಮಠದ ಗುರುಬಸವ ಶ್ರೀ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್ ಸಂಗೂರ ಸೇರಿದಂತೆ ಇತರರು ಇದ್ದರು.