ಕರೋನಾ ವೈರಸ್- ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ವಾರ್ಡ್: ಡಾ.ನಾಗರಾಜ ನಾಯಕ್

Share

ಹಾವೇರಿ: ಕರೊನಾ ವೈರಸ್‍ ಗುಣ ಲಕ್ಷಣಗಳು ಕಂಡುಬಂದಂತಹ ರೋಗಿಗಳ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆಗಾಗಿ ಜಿಲ್ಲೆಯಲ್ಲಿ ವಿಶೇಷ ಚಿಕಿತ್ಸಾ ಘಟಕ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್ ಅವರು ತಿಳಿಸಿದ್ದಾರೆ.

ವಿಶೇಷ ಘಟಕದಲ್ಲಿ ನಾಲ್ಕು ಬೆಡ್‍ಗಳ ಎರಡು ಕೊಠಡಿಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಮತ್ತು ಹಗಲು ನಿರಂತರವಾಗಿ ಇಬ್ಬರು ಸ್ಟಾಪ್‍ನರ್ಸ್ ಹಾಗೂ ನುರಿತ ವೈದ್ಯರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕರೊನಾ ಸೋಂಕು ಕಂಡುಬಂದಿಲ್ಲ. ಆದರೂ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಸ್ಥಾನಿಕ ವೈದ್ಯಾಧಿಕಾರಿ ಡಾ.ಸುರೇಶ ಪೂಜಾರ ಮಾಹಿತಿ ನೀಡಿ, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಂದಿಗಳು, ರೋಗಿಗಳು ಮತ್ತು ಸಾರ್ವಜನಿಕರು ಆಸ್ಪತ್ರೆಯ ಕೆಲಸದ ಅವಧಿಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ ಎಂದರು.