ಡಿ.30 ರಂದು ಜಿಲ್ಲೆಯ ಎಂಟು ತಾಲೂಕಾ ಕೇಂದ್ರದಲ್ಲಿ ಗ್ರಾ.ಪಂ.ಚುನಾವಣೆ ಮತ ಎಣಿಕೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

Share

ಹಾವೇರಿ: ಜಿಲ್ಲೆಯ ಗ್ರಾಮ ಪಂಚಾಯತ್‍ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಡಿ.30 ರಂದು ಜಿಲ್ಲೆಯ ಎಂಟು ತಾಲೂಕು ಕೇಂದ್ರಗಳಲ್ಲಿ ಜರುಗಲಿದೆ. ಎಣಿಕೆಗಾಗಿ 323 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಮೂರು ಪಾಳೆಯಲ್ಲಿ ಪಂಚಾಯತಿಗಳನ್ನು ವಿಂಗಡಿಸಿ ಮತ ಎಣಿಕೆ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಮಾಧ್ಯಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಿ. 22 ರಂದು ನಡೆದ 104 ಹಾಗೂ ಡಿ. 27 ರಂದು ನಡೆದ 105 ಗ್ರಾಮ ಪಂಚಾಯತಿಗಳ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಡಿ.30ರ ಬುಧವಾರ ಬೆಳಿಗ್ಗೆ 8 ರಿಂದ ಜಿಲ್ಲೆಯ ಎಂಟು ತಾಲೂಕಾ ಕೇಂದ್ರಗಳಲ್ಲಿ ಮತ ಎಣಿಕೆ ಜರುಗಲಿದೆ ಎಂದು ತಿಳಿಸಿದರು.

ಆಯಾ ತಾಲೂಕಾ ಕೇಂದ್ರಗಳಲ್ಲಿ ನಡೆಯುವ ಎಣಿಕೆ ಕಾರ್ಯಕ್ಕೆ ಸಾಮಾಜಿಕ ಅಂತರ ಮತ್ತು ಜನದಟ್ಟಣಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೂರು ಅವದಿ ನಿಗದಿ ಪಡಿಸಲಾಗಿದೆ. ಮೂರು ಪ್ರತ್ಯೇಕ ಬಣ್ಣದ ಪಾಸ್‍ಗಳನ್ನು ಅಭ್ಯರ್ಥಿಗಳಿಗೆ ಹಾಗೂ ಏಜೆಂಟರಿಗೆ ನೀಡಲಾಗುವುದು ಎಂದು ಹೇಳಿದರು.

ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ಗಂಟೆವರೆಗೆ ಗುಲಾಬಿ ಬಣ್ಣದ ಕಾರ್ಡ್, ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆವರೆಗೆ ನೀಲಿ ಬಣ್ಣದ ಕಾರ್ಡ್ ಹಾಗೂ ಸಂಜೆ 4 ರಿಂದ ಮುಕ್ತಾಯದವರೆಗೆ ಹಳದಿ ಬಣ್ಣದ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ. ಆಯಾ ಅವಧಿಯಲ್ಲಿ ಎಣಿಕೆಗೊಳ್ಳುವ ಪಂಚಾಯತಿಯ ಅಭ್ಯರ್ಥಿಗಳು ಹಾಗೂ ಏಜೆಂಟರುಗಳು ಮಾತ್ರ ತಮಗೆ ನೀಡಿದ ಪಾಸ್‍ಗಳೊಂದಿಗೆ ಎಣಿಕೆ ಕೇಂದ್ರಕ್ಕೆ ಪ್ರವೇಶ ಮಾಡಬಹುದು ಎಂದು ತಿಳಿಸಿದರು.

ಜಿಲ್ಲೆಯ 209 ಗ್ರಾಮ ಪಂಚಾಯತ್‍ಗಳ 1056 ಕ್ಷೇತ್ರಗಳ 2967 ಸ್ಥಾನಗಳ ಪೈಕಿ 68 ಕ್ಷೇತ್ರಗಳ 224 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 988 ಕ್ಷೇತ್ರಗಳ 2743 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 7450 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಮೊದಲ ಹಂತದಲ್ಲಿ 84.01 ಹಾಗೂ ಎರಡನೇ ಹಂತದಲ್ಲಿ 85.13 ರಷ್ಟು ಮತದಾನವಾಗಿದೆ. ಶೇ.85.64 ರಷ್ಟು ಪುರುಷರು, ಶೇ.83.46 ರಷ್ಟು ಮಹಿಳೆರು ಹಾಗೂ ಇತರೆ ಶೇ.4.17 ರಷ್ಟು ಸೇರಿ 84.59 ರಷ್ಟು ಮತದಾನವಾಗಿದೆ ಎಂದರು.

ಬೆಳಿಗ್ಗೆ 8 ರಿಂದ ಆರಂಭಗೊಳ್ಳಲಿರುವ ಮತ ಎಣಿಕೆಗೆ ಈಗಾಗಲೇ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ತಾಲೂಕಾ ಕೇಂದ್ರದ ನಿಗದಿತ ಸ್ಥಳದಲ್ಲಿ ಮತ ಎಣಿಕೆ ನಡೆಯಲಿದೆ. ಆಯಾ ತಾಲೂಕಿನ ಒಟ್ಟು ಪಂಚಾಯತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುವುದು. ದೊಡ್ಡ ಪಂಚಾಯತಿಗಳನ್ನು ಮೊದಲ ಅವಧಿಯಲ್ಲಿ ಎಣಿಕೆಗೆ ತೆಗೆದುಕೊಳ್ಳಲಾಗುವುದು. ಮತ ಎಣಿಕೆಗಾಗಿ ಈಗಾಗಲೇ ಜಿಲ್ಲೆಯಾದ್ಯಂತ 325 ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬ ಎಣಿಕೆ ಉಸ್ತುವಾರಿ ಅಧಿಕಾರಿ, ಎರಡು ಜನ ಎಣಿಕೆ ಸಹಾಯಕರು, ಒಬ್ಬ ಗ್ರೂಪ್ ಡಿ ನೌಕರ ಸೇರಿದಂತೆ ನಾಲ್ಕು ಜನರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ 704 ಎಣಿಕೆ ಸಹಾಯಕರು, 323 ಟೇಬಲ್ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು‌.

ಮತ ಎಣಿಕೆ ಕೇಂದ್ರ ವಿವರ: ಹಾವೇರಿ ನಗರದ ಶ್ರೀ ಶಿವಲಿಂಗೇಶ್ವರ ಮಹಿಳಾ ಕಾಲೇಜು, ರಾಣೇಬೆನ್ನೂರು ನಗರದ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಿರೇಕೆರೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಟ್ಟಿಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಇಂಗ್ಲೀಷ್ ಮಿಡಿಯಂ ಹೈಸ್ಕೂಲ್, ಬ್ಯಾಡಗಿ ಪಟ್ಟಣದ ಎಸ್.ಜೆ.ವ್ಹಿ.ಹಿರಿಯ ಪ್ರಾಥಮಿಕ ಶಾಲೆ, ಸವಣೂರು ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಶಿಗ್ಗಾಂವ ನಗರದ ಜೆ.ಎಂ.ಜಿ.ಶಾಲೆ ಹಾಗೂ ಹಾನಗಲ್‍ನ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಣಿಕೆ ನಡೆಯಲಿದೆ ಎಂದು ವಿವರಿಸಿದರು.

ಪ್ರಕರಣ: ಮಾದರಿ ನೀತಿ ಸಂಹಿತೆಯಡಿ ಜಿಲ್ಲೆಯಲ್ಲಿ ಈವರೆಗೆ 11 ಪ್ರಕರಣಗಳಲ್ಲಿ ಎಫ್.ಐ.ಆರ್. ದಾಖಲಿಸಲಾಗಿದೆ. 574 ಶಸ್ತ್ರಾಸ್ತ್ರಗಳಲ್ಲಿ 106 ವಿನಾಯಿತಿ ಹೊಂದಿವೆ, 468 ಡಿಪಾಜಿಟ್ ಮಾಡಿಕೊಳ್ಳಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಬಂಧಕ ಕ್ರಮಗಳಾದ(107) ಅಡಿ ಒಟ್ಟು 375 ಪ್ರಕರಣಗಳ ಪೈಕಿ 87 ಪ್ರಕರಣಗಳಿಗೆ ಇಂಟೇರಿಯಮ್ ಬಾಂಡ್ ನೀಡಲಾಗಿದೆ ಎಂದು ವಿವರಿಸಿದರು.