ಜಾನುವಾರ ಜಾತ್ರೆಗೆ ಶಾಸಕ ನೆಹರು ಓಲೇಕಾರ ಚಾಲನೆ: ಗಮನ ಸೇಳೆದ ದೇಶಿ ತಳಿಯ ಎತ್ತುಗಳು

Share

ಹಾವೇರಿ: ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಾವೇರಿ ಜಿಲ್ಲಾ ಪಂಚಾಯತಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಧಾರವಾಡ ಹಾಲು ಒಕ್ಕೂಟ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಂಯುಕ್ತಾಶ್ರಯದಲ್ಲಿ ಎಪಿಎಂಸಿ ಬಸವೇಶ್ವರ ಜಾನುವಾರ ಮಾರುಕಟ್ಟೆ ಪ್ರಾಂಗಣದಲ್ಲಿ ಆಯೋಜಿಸಿದ್ದ ಶಿವಬಸವ ಜಾನುವಾರ ಜಾತ್ರೆಗೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ ಮಾತನಾಡಿ, ಪ್ರತಿ ವರ್ಷದಂತೆ ಹುಕ್ಕೇರಿಮಠದ ನಮ್ಮೂರ ಜಾತ್ರೆ ಅಂಗವಾಗಿ ಜಾನುವಾರಗಳ ಜಾತ್ರೆ ನಡೆದು ಬರುತ್ತಿದೆ. ಈ ಜಾತ್ರೆಯಿಂದ ರೈತರಿಗೆ ವಿವಿಧ ತಳಿಗಳ ಹಸುಗಳು, ಅವುಗಳ ಲಾಲನೆ, ಪೋಷಣೆಯ ಬಗ್ಗೆ ಸಮಗ್ರ ಮಾಹಿತಿ ದೊರೆಯುತ್ತದೆ.‌ ಉತ್ತಮ ರೀತಿಯಲ್ಲಿ ರಾಸುಗಳನ್ನು ಸಾಕಾಣಿಕೆ ಮಾಡಿದ ರೈತರಿಂದ ಉದಯೋನ್ಮುಖ ರೈತರಿಗೆ ಮಾಹಿತಿ ಲಭ್ಯವಾಗುವಂತ ಕೆಲಸ ಈ ಜಾತ್ರೆಯಿಂದ ನಡೆಯುತ್ತದೆ. ಒಟ್ಟಾರೆ ಹುಕ್ಕೇರಿಮಠದ ಜಾತ್ರೆ ಎಂದರೆ, ಬರಿ ಮೋಜು, ಮಸ್ತಿಗೆ ಮಾತ್ರ ಸೀಮಿತವಾಗದೇ, ಜನ ಪರ ಚಿಂತನೆಗಳನ್ನು ಒಳಗೊಂಡಿರುತ್ತದೆ ಎಂದರು.‌

ಹುಕ್ಕೇರಿಮಠದ ಸದಾಶಿವ ಶ್ರೀಗಳು ಮಾತನಾಡಿ, ದೇಶಿಯ ಗೋ ತಳಿಗಳ ರಕ್ಷಣೆಯ ಸಂಕಲ್ಪದ ಜೊತೆಗೆ ರೈತರಿಗೆ ಪೊತ್ಸಾಹ ನೀಡಿಕೆ ಹಾಗೂ ಪ್ರೇರಣೆ ನೀಡುವ ಉದ್ದೇಶದಿಂದ ಜಾನುವಾರ ಪರ್ದಶನ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಜಾತ್ರೆಯನ್ನು ಸುಮಾರು 49 ವರ್ಷಗಳಿಂದ ಆಚರಿದಲಾಗುತ್ತಿದ್ದು, ಇಂದಿನಿಂದ 6 ತಿಂಗಳು ಜಾತ್ರೆ ನಡೆಯಲಿದೆ ಎಂದರು.

ಈ ಬಾರಿ ಉಚಿತವಾಗಿ ಪಶುಗಳಿಗೆ ಚಿಕಿತ್ಸಾ ಶಿಬಿರ ಹಾಗೂ ಬೇರೆ ಬೇರೆ ತಳಿಗಳ ಜಾನುವಾರ ಪ್ರದರ್ಶನ ನಡೆಯಲಿದೆ. ಇದರ ಜೊತೆಗೆ ಉತ್ತಮ ರೀತಿಯಲ್ಲಿ ಪೋಷಣೆ ಮಾಡಿದ ರಾಸುಗಳಿಗೆ ಬಹುಮಾನ ನೀಡುವಂತ ಕಾರ್ಯಕ್ರಮ ರೂಪಿಸಲಾಗಿದೆ. ಈ ಜಾತ್ರೆಗೆ ದೇಶಿಯ ತಳಿಗಳ ಹಸುಗಳು ಸೇರಿದಂತೆ ಬೇರೆ ತಳಿಗಳ ಹಸುಗಳು ಬಂದಿವೆ ಎಂದು ಹೇಳಿದರು.

ಪಶುವೈದ್ಯ ಡಾ. ಸಣ್ಣಕ್ಕಿ ಮಾತನಾಡಿ, ಜಾನುವಾರ ಜಾತ್ರೆಯಲ್ಲಿ ಕಿಲಾರಿ, ಹಳ್ಳಿಕಾರ, ಎಚ್.ಎಫ್, ಜುವಾರಿ ತಳಿಯ ಎತ್ತುಗಳು ಹಾಗೂ ಸೂರ್ತಿ, ಮೂರಾ ಜಾತಿಯ ಎಮ್ಮೆಗಳು ಸೇರಿದಂತೆ ಸುಮಾರು 8 ತಳಿಯ 80 ಕ್ಕೂ ಹೆಚ್ಚು ಜಾನುವಾರಗಳು ಪ್ರದರ್ಶನಕ್ಕಿವೆ. ಜಾನುವಾರುಗಳಿಗೆ ಇಲಾಖೆಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.