ಎರಡು ತಿಂಗಳಲ್ಲಿ ಹಾವೇರಿಯಲ್ಲಿ 48 ಮಂದಿ ನಾಪತ್ತೆ: ಎಸ್ಪಿ ದೇವರಾಜ್

Share

ಹಾವೇರಿ, ಜೂನ್ 6: ಹಾವೇರಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಸುಮಾರು 48 ಮಂದಿ ನಾಪತ್ತೆಯಾಗಿದ್ದಾರೆಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 48 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಇಲ್ಲಿನ 19 ಪೊಲೀಸ್ ಠಾಣೆಗಳಲ್ಲಿ ಈ ಪ್ರಕರಣಗಳು ದಾಖಲಾಗಿದ್ದು 8 ಪುರುಷರು 40 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ ಹಾವೇರಿಯ ಎಸ್ಪಿ ಕೆ.ಜಿ.ದೇವರಾಜ್ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇಯ ಅಲೆ ಶುರುವಾದ ಮೇಲೂ ಇಷ್ಟು ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಹೀಗೆ ನಾಪತ್ತೆಯಾದ 40 ಮಹಿಳೆಯರಲ್ಲಿ 24 ಯುವತಿಯರು ಸೇರಿದ್ದಾರೆ. ಬಹುತೇಕ ಯುವತಿಯರು ಗೆಳತಿ ಮನೆಗೆ, ಟೈಲರ್ ಅಂಗಡಿಗೆ ಹೋಗುವ ಕಾರಣ ಕೊಟ್ಟಿದ್ದಾರೆ. ಈ ರೀತಿ ಹೇಳಿ ಹೋದವರು ಮನೆಗೆ ವಾಪಸ್ ಬಂದಿಲ್ಲ ಎಂದು ಎಸ್ಪಿ ತಿಳಿಸಿದರು.

ಇದೇ ವೇಳೆ ಪುರುಷರು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದು ಬೇಜಾರಾಗಿದೆ ಎಂದು ಹೇಳಿ ಹೋದವರು ಮನೆಗೆ ಬಂದಿಲ್ಲ. ಇನ್ನು ಕೆಲವರು ತಂದೆ ತಾಯಿ ಬುದ್ದಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋಗಿದ್ದಾರೆ. ಎರಡು ತಿಂಗಳಲ್ಲಿ 48 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 10 ಪ್ರಕರಣಗಳನ್ನ ಭೇದಿಸಲಾಗಿದೆ ಎಂದು ಎಸ್ಪಿ ದೇವರಾಜ್ ತಿಳಿಸಿದರು.

ಕೊರೊನಾ ಮತ್ತು ಲಾಕ್ ಡೌನ್ ಬಿಗಿ ಬಂದೋಬಸ್ತ್​ಗೆ ಹೆಚ್ಚು ಆದ್ಯತೆ ನೀಡಿರುವ ಕಾರಣ ನಾಪತ್ತೆ ಪ್ರಕರಣಗಳಿಗೆ ಹೆಚ್ಚು ಒತ್ತು ಕೊಡಲು ಆಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು