ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪೈಲೆಟ್ ಜಿಲ್ಲೆಯಾಗಿ ಹಾವೇರಿ ಆಯ್ಕೆ

Share

ಹಾವೇರಿ, ಜೂನ್ 3: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ (ಎನ್ಎಫ್ಎಸ್ಎಂ) ಪ್ರಧಾನಮಂತ್ರಿಗಳು ರೂಪಿಸಿರುವ ಎಣ್ಣೆ ಹಾಗೂ ಬೆಳೆಕಾಳು ಬೆಳೆಗಳ ಬಹುಬೆಳೆ ಯೋಜನೆಗೆ ಹಾವೇರಿ ಜಿಲ್ಲೆಯನ್ನು ಕರ್ನಾಟಕ ರಾಜ್ಯದಲ್ಲಿ ಪೈಲೆಟ್ ಜಿಲ್ಲೆಯಾಗಿ ಆಯ್ಕೆ ಮಾಡಲಾಗಿದೆ.

ಈ ಕುರಿತು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲ ಅವರು ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬುಧವಾರ ಹಾವೇರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿ ರೈತರಿಗೆ ಪೈಲೆಟ್ ಯೋಜನೆಯಡಿ ದ್ವಿದಳ ಧಾನ್ಯಗಳ ಬಿತ್ತನೆ ಬೀಜಗಳ ಕಿಟ್‌ಗಳನ್ನು ವಿತರಿಸಿ ಮಾಹಿತಿ ನೀಡಿದರು.

ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ ಒಂದಲ್ಲ ಒಂದು ಬೆಳೆ ರೈತನ ಕೈಹಿಡಿದು ನಿಶ್ಚಿತ ಆದಾಯದ ಜೊತೆಗೆ ರೈತರ ಆದಾಯ ದ್ವಿಗುಣಗೊಳ್ಳುತ್ತದೆ. ರೈತರ ಬದುಕು ಸುಧಾರಿಸುತ್ತದೆ ಎಂಬ ಆಶಯದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ವಿಶೇಷ ಕಾಳಜಿ ವಹಿಸಿ ಕೃಷಿ ಸಚಿವರಾದ ಬಿ.ಸಿ ಪಾಟೀಲ ಅವರು ಕರ್ನಾಟಕ ರಾಜ್ಯದಲ್ಲಿ ಹಾವೇರಿ ಜಿಲ್ಲೆಗೆ ಈ ಯೋಜನೆಯನ್ನು ಮುಂಜೂರು ಮಾಡಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಈ ಬೆಳೆಯ ಅಂತರ ಬೆಳೆಯಾಗಿ ಅಥವಾ ಪ್ರತ್ಯೇಕ ಬೆಳೆಯಾಗಿ, ಸೋಯಾ, ತೊಗರಿ, ಶೇಂಗಾ, ಸೂರ್ಯಕಾಂತಿ ಎಣ್ಣೆ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆದರೆ ನಿಶ್ಚಿತವಾದ ಆದಾಯ ಬರಲಿದೆ. ಜಿಲ್ಲೆಯಲ್ಲಿ ೨೪೪೧ ಕ್ವಿಂಟಲ್ ದ್ವಿದಳ ಧಾನ್ಯ ಬೀಜಗಳು ಪೂರೈಕೆಯಾಗಿವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಮಾಹಿತಿ ನೀಡಿದರು.