ಹಾವೇರಿಯಲ್ಲಿ ನಾಳೆಯಿಂದ ಅಂಗವಿಕಲರಿಗೆ ಕೋವಿಡ್ ಲಸಿಕೆ

Share

ಹಾವೇರಿ, ಜೂನ್ 6: ಜಿಲ್ಲೆಯಲ್ಲಿರುವ ಅಂಗವಿಕಲರು, ಬುದ್ಧಿಮಾಂದ್ಯರು ಹಾಗೂ ಹಿರಿಯ ನಾಗರಿಕರಿಗೆ ಸೋಮವಾರದಿಂದ ಗ್ರಾಪಂವಾರು ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಅಂಗವಿಕರಿಗೆ ಲಸಿಕೆ ಕಾರ್ಯಕ್ರಮ ಕುರಿತು ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಗ್ರಾಪಂಗಳ ಅಂಗವಿಕಲರಿಗೆ ಕೋವಿಡ್ ಲಸಿಕೆ ಹಾಕುವ ಕುರಿತು ಮೈಕ್ರೋಪ್ಲಾನ್ ಸಿದ್ಧಪಡಿಸಿಕೊಳ್ಳಬೇಕು. ಲಸಿಕೆಗೆ ಅಗತ್ಯವಾದ ಜಾಗವನ್ನು ಗುರುತಿಸಿ ಕುಡಿಯುವ ನೀರು, ನೆರಳು, ಮೂಲ ಸೌಕರ್ಯಗಳನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

18 ವರ್ಷ ಮೇಲ್ಪಟ್ಟ 44 ವರ್ಷದವರೆಗೆ ಹಾಗೂ 44 ವರ್ಷ ಮೇಲ್ಪಟ್ಟ ಅಂಗವಿಕಲರಿಗೆ ಲಸಿಕೆ ಹಾಕಲಾಗುವುದು. ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರಿಗೆ ಹಾಗೂ 90 ವರ್ಷ ಮೇಲ್ಪಟ್ಟ ಹಿರಿಯರಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಪಡೆಯಲು ಬರುವವರಿಗೆ ಗ್ರಾಪಂನಿಂದ ವಾಹನ ವ್ಯವಸ್ಥೆ ಮಾಡಬೇಕು ಎಂದರು.

ಜಿಪಂ ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ಅಂಗವಿಕಲರಿಗೆ ಒಂದು ಪಾಯಿಂಟ್​ನಲ್ಲಿ ಕನಿಷ್ಠ ನೂರು ಜನರಿಗೆ ಲಸಿಕೆ ಹಾಕಬೇಕು. ವೃದ್ಧಾಶ್ರಮಗಳಿದ್ದರೆ ಅಲ್ಲಿ ವಾಸ ಮಾಡುವ ಹಿರಿಯ ನಾಗರಿಕರಿಗೂ ಲಸಿಕೆ ಹಾಕಲು ಕ್ರಮವಹಿಸಬೇಕು. ನಾಲ್ಕು ದಿನದೊಳಗಾಗಿ ಜಿಲ್ಲೆಯ ಎಲ್ಲ ಅಂಗವಿಕಲರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ, ಅಂಗವಿಕಲರಿಗೆ ಕೋವಿಡ್ ಲಸಿಕೆ ಕುರಿತು ಮಾಹಿತಿ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.