ಉದ್ಯಮಗಳ ಪ್ರೋತ್ಸಾಹಕ್ಕೆ ಸಾಲ ನೀಡಲು ಆದ್ಯತೆ ನೀಡಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

Share

ಹಾವೇರಿ: ಬ್ಯಾಂಕುಗಳು ಕೃಷಿ, ಸ್ವ ಸಹಾಯ ಗುಂಪುಗಳಿಗೆ ಸಾಲ ನೀಡುವಂತೆ ಸ್ವ ಉದ್ಯೋಗ ಕೈಗೊಳ್ಳಲು ಮುಂದೆಬರುವ ಯುವ ಉದ್ಯಮದಾರರಿಗೆ ಸಾಲ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಹೇಳಿದರು.

ನಗರದ ರಜನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಜಿಲ್ಲಾ ಬ್ಯಾಂಕುಗಳ ಗ್ರಾಹಕರ ಜಾಗೃತಿ ಹಾಗೂ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಸಬಲರನ್ನಾಗಿ ಮಾಡುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ. ಜನರಿಗೆ ಉಳಿತಾಯ ಖಾತೆ, ಬ್ಯಾಂಕಿಂಗ್ ವಿಮೆ, ಬಾಲ ಸಾಲ, ಕೃಷಿ ಸಾಲ ಹಾಗೂ ಇತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗ್ರಾಹಕರೊಂದಿಗೆ ಆತ್ಮೀಯವಾಗಿ ವ್ಯವಹರಿಸಬೇಕು. ವಿಶೇಷವಾಗಿ ವಯೋವೃದ್ಧರೊಂದಿಗೆ ಸಹನೆಯಿಂದ ವರ್ತಿಸಬೇಕು ಹಾಗೂ ಅವರಿಗೆ ಅರ್ಥವಾಗುವಂತೆ ವಿವಿಧ ಯೋಜನೆಗಳ ಬಗ್ಗೆ ತಿಳಿಸಿಹೇಳಬೇಕು. ಗ್ರಾಮೀಣ ಜನತೆಗೆ ಸಾಲಸೌಲಭ್ಯ, ಉಳಿತಾಯ ಖಾತೆ, ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ಅವರಿಗೆ ದೊರೆಯುತ್ತದೆ ಎಂದು ಹೇಳಿದರು.

ಯುವ ಸಮೂಹ ಇದರ ಸದುಪಯೋಗ ಪಡೆದುಕೊಂಡು ಸ್ವ ಉದ್ಯೋಗ ಕೈಗೊಳ್ಳಬೇಕು. ನಿಮ್ಮ ಅವಶ್ಯಕತೆಗೆ ತಕ್ಕಂತ ಉದ್ಯೋಗ ಆಯ್ಕೆ ಮಾಡಿ ಬ್ಯಾಂಕಿನಲ್ಲಿರುವ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಗೃಹಸಾಲ ಬಡ್ಡಿ ಮೊದಲು ಶೇ. 9 ರಿಂದ 9.5 ಇತ್ತು. ಈಗ ಶೇ. 7 ರಿಂದ7.5 ವರೆಗೆ ಇಳಿಕೆಯಾಗಿದೆ. ವಾಹನ ಸಾಲ, ಕೃಷಿ ಸಾಲ, ಉಳಿತಾಯ ಖಾತೆ, ಶಿಕ್ಷಣ ಸಾಲ, ಸಣ್ಣ ಉದ್ಯಮಗಳು ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯವನ್ನು ಪಡೆದು ಬ್ಯಾಂಕಿನ ಸದುಪಯೋಗಪಡೆದುಕೊಳ್ಳಬೇಕು. ಜನರು ಮಾಡುವ ಉದ್ಯೋಗಗಳನ್ನು ಬ್ಯಾಂಕುಗಳು ಪ್ರೋತ್ಸಾಹಿಸುತ್ತಿವೆ. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗಗಳು ದೊರೆಯುತ್ತಿವೆ. ನಮ್ಮ ಜಿಲ್ಲೆಯಲ್ಲಿ ಗ್ರಾಹಕರ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಲು ಮನೆ-ಮನೆಗೆ ಹೋಗಿ ಪ್ರಚಾರಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಗವಿಸಿದ್ಧಪ್ಪ ಬೆಲ್ಲದ ಅವರು ಮಾತನಾಡಿ, ಬ್ಯಾಂಕಿನಲ್ಲಿರುವ ಸೌಲಭ್ಯಗಳು ಮಾಹಿತಿ ಕುರಿತು ಜನರಿಗೆ ಜಾಗೃತಿ ಮೂಡಿಸಲು ಒಂದೇ ಸೂರಿನಡಿ 21 ಬ್ಯಾಂಕುಗಳನ್ನು ಸೇರಿಸಿದ್ದೇವೆ. ಸ್ವಸಹಾಯ ತರಬೇತಿಗಳನ್ನು ಬ್ಯಾಂಕುಗಳಿಂದ ನೀಡಲಾಗುತ್ತದೆ. ವಿವಿಧ ಸಾಲಗಳ ಬಗ್ಗೆ ಪ್ರತಿಯೊಂದು ಬ್ಯಾಂಕಿನವರು ಮಾಹಿತಿ ನೀಡುತ್ತಾರೆ. ಬೆಳೆಸಾಲದಲ್ಲಿ ಶೇ. 7 ಸಾಲ ಹಾಗೂ 3% ಸಬ್ಸಿಡಿ ನೀಡಲಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಪೋರೇಶನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಎಸ್.ಬಿ.ಐ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕಿನ (ಗ್ರಾಹಕರಿಗೆ) ಫಲಾನುಭವಿಗಳಿಗೆ ಸಾಲದ ಅನುಮೋದನಾ ಪತ್ರವನ್ನು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ವಿತರಿಸಿದರು.

ಬರೋಡಾ ಬ್ಯಾಂಕಿನ ಮಲ್ಲೇಶ್ ಹಾಗೂ ಕಾರ್ಪೋರೇಶನ್ ಬ್ಯಾಂಕಿನ ಸುನೀತಾ ಬಾರ್ಕಿ ತಮ್ಮ ಅನುಭವ ಹಂಚಿಕೊಂಡರು. ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಡಿಬಿಐ, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸೇರಿದಂತೆ 21 ಬ್ಯಾಂಕುಗಳು ಮಳಿಗೆಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಮಾಹಿತಿ ನೀಡುವ ಕಾರ್ಯ ನಡೆಯಿತು.

ಕೆವಿಜಿ ಬ್ಯಾಂಕಿನ ಅಧ್ಯಕ ಪಿ.ಗೋಪಿಕೃಷ್ಣ ಹಾಗೂ ದಾವಣಗೆರೆಯ ಎಸ್.ಬಿ.ಐ ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಇಂದ್ರನೀಲ್ ಬಂಜಾ ಅವರು ಮಾತನಾಡಿದರು. ಹಾವೇರಿಯ ಲೀಡ್ ಬ್ಯಾಂಕ್ ಚೀಪ್ ಮ್ಯಾನೆಜರ್ ಪ್ರಭುದೇವ ಎನ್.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮುಖ್ಯಸ್ಥ ಶ್ರೀನಿವಾಸ ರವಿಪತಿ, ಸಿಂಡಿಕೇಟ್ ಬ್ಯಾಂಕಿನ ರಿಜಿನಲ್ ಮ್ಯಾನೇಜರ್ ನವೀನ್ ಕುಮಾರ, ಕೆನರಾ ಬ್ಯಾಂಕಿನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ವೆಂಕಟೇಶ ಆರ್.ಎಸ್, ಹುಬ್ಬಳ್ಳಿಯ ಕಾರ್ಪೋರೇಶನ್ ಬ್ಯಾಂಕಿನ್ ಝೋನಲ್ ಹೆಡ್ ಸಿ. ಪ್ರಭು, ಹಾಗೂ ಮಹದೇವ ಮತ್ತಿತರರು ಉಪಸ್ಥಿತರಿದ್ದರು.