ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನಲ್ಲಿ ಗ್ರಾಹಕ ಸ್ನೇಹಿ ಅನುಕೂಲಗಳಿವೆ: ಸಂಸದ ಶಿವಕುಮಾರ ಉದಾಸಿ

Share

ಹಾವೇರಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನಲ್ಲಿ ಗ್ರಾಹಕ ಸ್ನೇಹಿ ಅನುಕೂಲಗಳಿದ್ದು, ಮನೆ ಬಾಗಿಲಿಗೆ ಬಂದು ಖಾತೆ ತೆರೆಯಲಾಗುತ್ತದೆ. ಇದೊಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದರು.

ಮಂಗಳವಾರ ನಗರದ ರಜನಿ ಹಾಲ್‍ನಲ್ಲಿ ಮೊದಲ ಗ್ರಾಹಕ ಸಂಪರ್ಕದಲ್ಲಿ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನಲ್ಲಿ ತಮ್ಮ ಖಾತೆ ತೆರೆದು ಅವರು ಮಾತನಾಡಿದರು.

ಇಲ್ಲಿ ಖಾತೆ ತೆರೆಯಲು ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ. ಕೇವಲ ಆಧಾರ್ ನಂಬರ್ ಮತ್ತು ಮೋಬಯಕ್ ಇದ್ದರೆ ಸಾಕು. ಕೆಲವೇ ನಿಮಿಷಗಳಲ್ಲಿ ಖಾತೆ ತೆರೆಯಬಹುದು. ಈಗಾಗಲೇ ಪೋಸ್ಟ್‍ಮನ್‍ಗಳಿಗೆ ಖಾತೆ ತೆರೆಯಲು ಮೊಬೈಲ್‍ಗಳನ್ನು ಪೂರೈಸಲಾಗಿದೆ ಹಾಗೂ ಅಂಚೆ ಕಚೇರಿಗಳಲ್ಲಿಯೂ ಕೂಡ ಖಾತೆ ತೆರೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸಾರ್ವಜನಿಕರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಪಡೆಯಬಹುದಾಗಿದೆ ಎಂದು ಹೇಳಿದರು.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ತನ್ನದೇ ಆದ ಮೊಬೈಲ್ ಆಪ್ ಹೊಂದಿದ್ದು ಬ್ಯಾಂಕ್‍ಗೆ ಸಂಬಂಧಪಟ್ಟ ಎಲ್ಲ ವ್ಯವಹಾರಗಳನ್ನು ಇಲ್ಲಿ ಮಾಡಬಹುದಾಗಿದೆ. ಅಂಚೆ ಕಚೇರಿ ಸಂಬಂಧಪಟ್ಟ ಎಸ್.ಬಿ.ಖಾತೆ, ಸುಕನ್ಯ ಸಮೃದ್ಧಿ ಖಾತೆ, ಆರ್.ಡಿ. ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ ಹಾಗೂ ಇತರೆ ಬ್ಯಾಂಕ್ ಖಾತಗಳಿಗೆ ಐ.ಎಂ.ಪಿ.ಎಸ್., ಆರ್.ಟಿ.ಜಿ.ಎಸ್ ಮತ್ತು ಎನ್.ಇ.ಎಫ್.ಟಿ. ಮುಖಾಂತರ ಹಣ ವರ್ಗಾವಣೆ ಮಾಡಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 17 ಬ್ಯಾಂಕುಗಳು ಭಾಗವಹಿಸಿದ್ದವು. ಉಪ ಅಂಚೆ ಅಧೀಕ್ಷಕ ನಿಂಗನಗೌಡ ಬಂಗಿಗೌಡ್ರ ಅವರು ಉದ್ಘಾಟನೆ ನೆರವೇರಿಸಿದರು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಜಗದೀಶ ಚಿಕ್ಕನರಗುಂದ, ಅಂಚೆ ಉಪ ವಿಭಾಗದ ಸಿ.ಪಿ.ಆಡೂರ, ಪೋಸ್ಟ್ ಮಾಸ್ಟರ್ ಎಸ್.ಎನ್.ಕೊಪ್ಪದ ಇತರರು ಉಪಸ್ಥಿತರಿದ್ದರು.