ಸಿಎಂ ಬಿಎಸ್​ವೈಗೆ ಮತ್ತೆ ಸಂಕಷ್ಟ: ಅಕ್ರಮ ಡಿ-ನೋಟಿಫಿಕೇಷನ್‌ ಕೇಸ್​​ ಮರು ತನಿಖೆಗೆ ಆದೇಶ

Share

ಬೆಂಗಳೂರು, ಜುಲೈ 3: ಬೆಳ್ಳಂದೂರು ಅಕ್ರಮ ಡಿ-ನೋಟಿಫಿಕೇಷನ್‌ ಪ್ರಕರಣದಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ.

ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್​ ತಿರಸ್ಕರಿಸಿರುವ ಲೋಕಾಯುಕ್ತ ನ್ಯಾಯಾಲಯ ತನಿಖೆ ಮುಂದುವರಿಸುವಂತೆ ಆದೇಶಿಸಿದೆ. ಈ ಮೂಲಕ ಕರ್ನಾಟಕ ಹೈಕೋರ್ಟ್​ ನೀಡಿದ ಹಿಂದಿನ ಆದೇಶವನ್ನು ಎತ್ತಿ ಹಿಡಿದಿದೆ.

ಸಮಯ ವ್ಯರ್ಥ ಮಾಡದೇ ತನಿಖೆ ನಡೆಸಬೇಕು. ಹೈಕೋರ್ಟ್​ ಆದೇಶ ಪರಿಗಣಿಸಿ ತನಿಖೆ ಮುಂದುವರಿಸಿ. ಬಳಿಕ ಪ್ರಕರಣದ ತನಿಖೆ ಕುರಿತಾದ ಅಂತಿಮ ವರದಿ ಸಲ್ಲಿಸಿ ಎಂದು ಲೋಕಾಯುಕ್ತ ಕೋರ್ಟ್​ ಡಿವೈಎಸ್​​ಪಿಗೆ ಆದೇಶಿಸಿದೆ.



ಸಿಎಂ ಯಡಿಯೂರಪ್ಪ ವಿರುದ್ಧ ವಾಸುದೇವರೆಡ್ಡಿ ಎಂಬುವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇರೆಗೆ ಯಡಿಯೂರಪ್ಪ ವಿರುದ್ಧ ಎಫ್​​ಐಆರ್​​ ದಾಖಲಾಗಿತ್ತು. ಈ ಹಿಂದೆಯೇ ತನ್ನ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿ ಎಂದು ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ದೂರು ದಾಖಲಿಸಲು ಎಲ್ಲರಿಗೂ ಹಕ್ಕು ಇದೆ. ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಬೇಕಿಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್ ಯಡಿಯೂರಪ್ಪ ಅರ್ಜಿ ವಜಾಗೊಳಿಸಿ ತನಿಖೆಗೆ ಆದೇಶಿಸಿತ್ತು.

ಲೋಕಾಯುಕ್ತ ಕೋರ್ಟ್‌ 2015 ಫೆ.18 ರಂದೇ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಅಂದಿನಿಂದ ಇಂದಿನವರೆಗೂ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧದ ಆರೋಪಗಳ ಕುರಿತು ಸಮರ್ಪಕ ತನಿಖೆ ಯಾಕೆ ನಡೆಸಿಲ್ಲ ಎಂದು ಪ್ರಶ್ನಿಸಿದ ಕೋರ್ಟ್​ ಲೋಕಾಯುಕ್ತ ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿತ್ತು.