ಜೋತು ಬಿದ್ದಿರುವ ಕೇಬಲ್ ತೆರವು ಮಾಡದಿದ್ದರೆ ಕಟ್ಟುನಿಟ್ಟಿನ ಆದೇಶ: ಹೈಕೋರ್ಟ್ ಎಚ್ಚರಿಕೆ

Share

ಬೆಂಗಳೂರು, ಜುಲೈ 13: ರಸ್ತೆಗಳ ಬದಿಗಳಲ್ಲಿ ಜೋತು ಬಿದ್ದಿರುವ ಕೇಬಲ್ ವೈರ್​​ಗಳನ್ನು ತೆರವು ಮಾಡಲು ತ್ವರಿತ ಕ್ರಮ ಕೈಗೊಳ್ಳದಿದ್ದರೆ, ಅವುಗಳನ್ನು ತೆರವುಗೊಳಿಸುವ ಕುರಿತು ಮುಂದಿನ ವಿಚಾರಣೆ ವೇಳೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗುವುದು ಎಂದು ಹೈಕೋರ್ಟ್ ಬಿಬಿಎಂಪಿಗೆ ಎಚ್ಚರಿಕೆ ನೀಡಿದೆ.

ರಸ್ತೆ ಇಕ್ಕೆಲಗಳಲ್ಲಿ ಹಾಗೂ ಫುಟ್​ಪಾತ್ ಮೇಲೆ ನೇತಾಡುತ್ತಿರುವ ಕೇಬಲ್​ಗಳಿಂದ ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಜನರ ಓಡಾಟಕ್ಕೆ ತೊಂದರೆ ಆಗುತ್ತಿರುವ ಕೇಬಲ್ ವೈರ್​ಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಸಹ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿತು. ಇದಕ್ಕೆ ಪಾಲಿಕೆ ಪರ ವಕೀಲರು ಉತ್ತರಿಸಿ, ನಗರದ ಎರಡು ವಲಯಗಳಲ್ಲಿ ಕೇಬಲ್ ತೆರವು ಕಾರ್ಯಾಚರಣೆ ನಡೆದಿದೆ. ಉಳಿದ  ಕಾರ್ಯ ಕೈಗೊಡಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೀವು ಎಲ್ಲಿಯೂ ಕೇಬಲ್ ತೆರವು ಕ್ರಮ ಕೈಗೊಂಡಂತೆಯೂ ಕಾಣುತ್ತಿಲ್ಲ. ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಹೀಗಾಗಿ, ನ್ಯಾಯಾಲಯ ಪಾದಚಾರಿ ಮಾರ್ಗ ಒತ್ತುವರಿ ತೆರವು ಸಂಬಂಧ ಈಗಾಗಲೇ ಹೊರಡಿಸಿರುವ ಆದೇಶ ಆಧರಿಸಿ ಕೇಬಲ್ ತೆರವಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಲಿದೆ ಎಂದು ತಿಳಿಸಿ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.