ಗ್ರಾ.ಪಂ. ಚುನಾವಣೆ, ಕೋರೊನಾ ಮಾರ್ಗಸೂಚಿ ಕಡ್ಡಾಯ: ಎಂ.ಸುಂದರೇಶ್ ಬಾಬು

Share

ಗದಗ: ಗ್ರಾಮ ಪಂಚಾಯತ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಮತಗಟ್ಟೆಗಳಲ್ಲಿ ಜರಗುವ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಕೋವಿಡ್-೧೯ ನಿಯಂತ್ರಣ ಕುರಿತಂತೆ ತಾಲೂಕುವಾರು ನೊಡೆಲ್ ಅಧಿಕಾರಿಗಳನ್ನು ನೇಮಿಸಲು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಇಂದು ಜರುಗಿದ ತಾಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ ಚುನಾವಣೆಯ ನಾಮಪತ್ರಗಳನ್ನು ಆಯಾ ಗ್ರಾಮ ಪಂಚಾಯತಗಳಲ್ಲಿ ಸ್ವೀಕೃತವಾಗುತ್ತಿದ್ದು ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯದ ಸಿಬ್ಬಂದಿ ಹಾಗೂ ಪರಿಕರಗಳ ವ್ಯವಸ್ಥೆ ಮಾಡಿಟ್ಟುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರು.

ಗದಗ ಜಿಲ್ಲೆಯಲ್ಲಿ ಡಿ.೨೨ ಹಾಗೂ ೨೭ರಂದು ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ಜರುಗುತ್ತಿದ್ದು, ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತರನ್ನು ಆರೋಗ್ಯ ತಪಾಸಣೆಗಾಗಿ ನಿಯೋಜಿಸಲು ಕ್ರಮ ಕೈಗೊಳ್ಳಬೇಕು. ಕೋರೋನಾ ಸೋಂಕಿತರಿಗೆ ಮತದಾನ ಮಾಡಲು ಸಾಯಂಕಾಲ ಒಂದು ಗಂಟೆ ನಿಗದಿಪಡಿಸಲಾಗಿದ್ದು ಈ ಸಂದರ್ಭದಲ್ಲಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ ಸೋಂಕಿತರನ್ನು ಗುರುತಿಸಿ ಅಗತ್ಯ ಸುರಕ್ಷಾ ಪರಿಕರಗಳೊಂದಿಗೆ ಅಂಬುಲೆನ್ಸ್ ಮೂಲಕ ಮತಗಟ್ಟೆಗೆ ಕರೆತಂದು ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲ ಸಿದ್ಧತೆ ಮಾಡಿಟ್ಟುಕೊಳ್ಳಲು ಹೇಳಿದರು.

ನಾಮಪತ್ರಗಳ ಸ್ವೀಕೃತಿಗಾಗಿ ಗ್ರಾಮ ಪಂಚಾಯತಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ನಿಯಮಿಸಲಾದ ಚುನಾವಣಾಧಿಕಾರಿಗಳಿಗೆ ಗ್ರಾಮ ಪಂಚಾಯತಗಳಿಂದ ಅಗತ್ಯದ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮ ಪಂಚಾಯತ ಚುನಾವಣೆಗೆ ಸಂಬಂಧಿಸಿದಂತೆ ನಿಯೋಜಿಸಲಾದ ಅಧಿಕಾರಿ ಸಿಬ್ಬಂದಿಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಿ ಚುನಾವಣಾ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದರು.