ರಾಣೇಬೆನ್ನೂರು, ಹಾವೇರಿ ಯುಜಿಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಲು ಸೂಚನೆ: ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ

Share

ಹಾವೇರಿ: ರಾಣೇಬೆನ್ನೂರು ಹಾಗೂ ಹಾವೇರಿ ನಗರಗಳ ಯುಜಿಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಬರುವ ಆಗಸ್ಟ್ 15ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಗಸ್ಟ್ 15 ರಂದು ಕಾಮಗಾರಿಗಳ ಉದ್ಘಾಟನೆಗೆ ಪುನಃ ಹಾವೇರಿಗೆ ಆಗಮಿಸುವೆ ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಾಡವಣೆ ಅಭಿವೃದ್ಧಿಗೆ ಸೂಚಿಸಲಾಗಿದೆ ಹಾಗೂ ಹೊಸ ಬಡಾವಣೆಗಳ ರಚನೆ ಸಂದರ್ಭದಲ್ಲಿ ರೈತರಿಗೆ ಶೇ.50 ಹಾಗೂ ಖಾಸಗಿ ಅವರಿಗೆ ಶೇ.50ರ ಅನುಪಾತದಲ್ಲಿ ಹಂಚಿಕೆ ಮಾಡಲು ತಿಳಿಸಲಾಗಿದೆ. ಬಳ್ಳಾರಿಯಲ್ಲಿ 102 ಎಕರೆ ಜಮೀನು ಶೇ.50-50 ಅನುಪಾತದಲ್ಲಿ ಬಡಾವಣೆ ಮಾಡಲಾಗಿದೆ. ಸರ್ಕಾರದ ಆದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಪತ್ರಕರ್ತರು ಕೆಲಸ ನಿರ್ವಹಿಸುತ್ತಿದ್ದು, ಹೊಸ ಬಡಾವಣೆಗಳ ರಚನೆ ಸಂದರ್ಭದಲ್ಲಿ ಶೇ.5 ರಷ್ಟು ಪತ್ರಕರ್ತರಿಗೆ ಮೀಸಲು ಇರಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೀಸ್‍ಗೆ ನೀಡಲಾದ ಆಸ್ತಿಗಳ ಹಣ ಸಂದಾಯವಾಗುತ್ತಿಲ್ಲ ಹಾಗೂ ನವೀಕರಣ ಮಾಡಲಾಗುತ್ತಿಲ್ಲ. ಹಾಗಾಗಿ ಸರ್ಕಾರದ ನಿಗಧಿಪಡಿಸಿದ ದರದಲ್ಲಿ ಲೀಸ್ ಪಡೆದವರಿಗೆ ಆಸ್ತಿನೀಡಿ ಸರ್ಕಾರದ ಬೊಕ್ಕಸಕ್ಕೆ ಹಣ ಕ್ರೋಢಿಕರಿಸಲಾಗುವುದು.

ಹಾವೇರಿ ನಗರಸಭೆ 22 ಹಾಗೂ ರಾಣೇಬೆನ್ನೂರು ನಗರಸಭೆ 16 ಪೌರ ಕಾರ್ಮಿಕರನ್ನು ಮರು ನೇಮಕಾತಿಗೆ ಸೂಚನೆ ನೀಡಲಾಗಿದೆ. ವಾಟರ್‍ಮನ್‍ಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.