ವಾರದೊಳಗೆ ಹಾವೇರಿ ಜಿಲ್ಲೆಯ ತಾಲೂಕಾವಾರು ಕೋವಿಡ್ ಚಿಕಿತ್ಸೆಗೆ ಕನಿಷ್ಠ 50 ಹಾಸಿಗೆ ವ್ಯವಸ್ಥೆಗೆ ಸೂಚನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Share

ಹಾವೇರಿ: ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದಾದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಸಿದ್ಧತೆಗಳನ್ನು ವಾರದೊಳಗೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಹಾಗೂ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತಜ್ಞರ ಪ್ರಕಾರ ಕೋವಿಡ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿವೆ. ದಿನಕ್ಕೆ 35 ಪ್ರಕರಣಗಳು ಪತ್ತೆಯಾದರೂ ಸೂಕ್ತ ವೈದ್ಯಕೀಯ ಚಿಕಿತ್ಸೆ, ಈ ಪ್ರಕರಣಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಕ್ವಾರಂಟೈನ್‍ಗೊಳಪಡಿಸಲು ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಪ್ರತಿ ತಾಲೂಕಿನಲ್ಲಿ ಕನಿಷ್ಠ 50 ಹಾಸಿಗೆಯ ಸೆಂಟ್ರಲೈಸ್ ಪ್ರಸರೈಸ್ ಆಕ್ಸಿಜನ್ ಸಪ್ಲೈಯುಳ್ಳ ವಾರ್ಡ್‍ಗಳನ್ನು ಸಿದ್ಧತೆಮಾಡಿಕೊಳ್ಳಬೇಕು. ಜಿಲ್ಲಾ ಆಸ್ಪತ್ರೆ ಹೊರತುಪಡಿಸಿ ಹಾವೇರಿ ತಾಲೂಕು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಈ ವ್ಯವಸ್ಥೆಯಾಗಬೇಕು. ಕೋವಿಡ್ ಲಕ್ಷಣಗಳು ಬಂದು ಪಾಸಿಟಿವ್ ಆದ ರೋಗಿಗಳು ಕೋವಿಡ್ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಎಸ್.ಓ.ಪಿ. ಮಾನದಂಡದಂತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕ್ರಮವಹಿಸಬೇಕು.

ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಐಸೋಲೇಷನ್ ವಾರ್ಡ್, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಕ್ವಾರಂಟೈನ್‍ಗೆ ಈಗಿನ ವ್ಯವಸ್ಥೆ ಜೊತೆಗೆ ಹೆಚ್ಚುವರಿಯಾಗಿ ಹಾಸ್ಟೇಲ್‍ಗಳನ್ನು ಗುರುತಿಸಿಕೊಂಡು ವ್ಯವಸ್ಥೆ ಮಾಡಬೇಕು. ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕರೆತರಲು ಈಗಿರುವ ಅಂಬ್ಯುಲೆನ್ಸ್ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ತಾಲೂಕಿಗೊಂದು ಅಂಬ್ಯುಲೆನ್ಸ್ ಒದಗಿಸಬೇಕು. ಕ್ವಾರಂಟೈನ್ ಮಾಡಲು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಕರೆತರಲು ಪ್ರತಿ ತಾಲೂಕಿಗೆ ಎರಡು ವಾಹನಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಯಾ ತಾಲೂಕಿನ ಪತ್ತೆಯಾದ ಕೋವಿಡ್ ಸೋಂಕಿತರನ್ನು ಆಯಾ ತಾಲೂಕಿನಲ್ಲಿ ಕ್ವಾರಂಟೈನ್‍ಗೆ ಒಳಪಡಿಸಬೇಕು. ಹೆಚ್ಚುವರಿಯಾದರೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಈಗಿರುವ ಬೆಡ್‍ಗಳ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ಮಾಡಿಕೊಳ್ಳಬೇಕು. ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸನ್ನದ್ಧರಾಗಬೇಕು ಎಂದು ಸೂಚನೆ ನೀಡಿದರು.

ಕ್ವಾರಂಟೈನ್ ಕೇಂದ್ರಗಳಲ್ಲಿರುವವರಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಕ್ರಮವಹಿಸಬೇಕು. ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲ್ಯಾಬ್‍ನಲ್ಲಿ ಒಂದು ಪಾಳೆಯಕ್ಕೆ 50 ರಂತೆ ದಿನಕ್ಕೆ 100 ಮಾದರಿಗಳ ಪರೀಕ್ಷೆ ನಡೆಸಬೇಕು. ನಮ್ಮ ಗುರಿಯಂತೆ 300 ಮಾದರಿಗಳ ಪರೀಕ್ಷೆಗಳ ಪರೀಕ್ಷೆಗೆ ಸಿದ್ಧಮಾಡಿಕೊಳ್ಳಬೇಕು. ತಾಲೂಕಾ ಆಸ್ಪತ್ರೆಗಳಲ್ಲಿ ಹೆಲ್ತ್ ವರ್ಕ್‍ರ್ ಸೇರಿದಂತೆ ವೈದ್ಯಕೀಯ ಹಾಗೂ ಅರೇ ವೈದ್ಯಕೀಯ ಸಿಬ್ಬಂದಿಗಳ ಕೊರತೆಗಳನ್ನು ನೀಗಿಸಲು ಆಯಾ ತಾಲೂಕಾ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಸೂಚನೆ ನೀಡಿದರು.

ಕಠಿಣ ಕ್ರಮ: ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಿಗಿ ಕ್ರಮ ಕೈಗೊಳ್ಳಬೇಕು. ಸರ್ಕಾರ ತೆಗೆದುಕೊಂಡ ತೀರ್ಮಾನದಂತೆ ಕಫ್ರ್ಯೂವನ್ನು ಕಠಿಣವಾಗಿ ಜಾರಿಗೊಳಿಸಬೇಕು. ಈ ಕುರಿತಂತೆ ಸ್ಥಳೀಯ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ಮಾಹಿತಿ ಒದಗಿಸಬೇಕು. ಶಿಗ್ಗಾಂವನಲ್ಲಿ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸ್ ವ್ಯವಸ್ಥೆ ಬಿಗಿಗೊಳಿಸಬೇಕು ಎಂದು ಸೂಚನೆ ನೀಡಿದರು.