ಹಾವೇರಿ: ಓರ್ವ ಮಹಿಳೆಗೆ ಕೋವಿಡ್ ಸೋಂಕು ದೃಢ

ಸಾಂದರ್ಭಿಕ ಚಿತ್ರ

Share

ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ ಓರ್ವ ಮಹಿಳೆಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 123 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಪೈಕಿ 35 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಜನರು ಮೃತಪಟ್ಟಿದ್ದು, 86 ಪ್ರಕರಣಗಳು ಸಕ್ರಿಯವಾಗಿವೆ.

ಸವಣೂರು ತಾಲೂಕು ಮನ್ನಂಗಿ ಗ್ರಾಮದ ನಿವಾಸಿ 19 ವರ್ಷದ ಮಹಿಳೆ(P-123) ತಂದೆ-ತಾಯಿಯೊಂದಿಗೆ ವಾಸವಾಗಿದ್ದು, ಏಳು ದಿನಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾಳೆ. ಸದರಿ ಸೋಂಕಿತ ಮಹಿಳೆಯ ಗಂಟಲು ದ್ರವದ ಮಾದರಿಯನ್ನು ಜೂನ್ 26 ರಂದು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜುಲೈ 2 ರಂದು ಕೋವಿಡ್ ಪಾಸಿಟಿವ್ ವರದಿ ಬಂದಿದೆ.

ಸೋಂಕಿತೆ ನಿವಾಸದ 100 ಮೀ.ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ ಹಾಗೂ ಮನ್ನಂಗಿ ಗ್ರಾಮವನ್ನು ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಸವಣೂರು ತಾಲೂಕಾ ತಹಶೀಲ್ದಾರ ಅವರನ್ನು ನೇಮಕ ಮಾಡಲಾಗಿದೆ.

ಇಬ್ಬರು ಗುಣಮುಖ, ಬಿಡುಗಡೆ: ಜೂನ್ 21 ರಂದು ಕೋವಿಡ್ ಸೋಂಕು ದೃಢಪಟ್ಟು ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾದ ಕಾರಣ ಶುಕ್ರವಾರ ಶಿಗ್ಗಾಂವ ದೇಸಾಯಿ ಗಲ್ಲಿ ನಿವಾಸಿ 45 ವರ್ಷದ ಮಹಿಳೆ (P-8698) ಹಾಗೂ ಸವಣೂರು ತಾಲೂಕು ಕಾರಡಗಿ ಗ್ರಾಮದ ನಿವಾಸಿ 38 ವರ್ಷದ ಮಹಿಳೆ ಆಶಾ ಕಾರ್ಯಕರ್ತೆ (P-8700) ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.