ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: ಒಂದೇ ದಿನ 49 ಜನರಿಗೆ ಸೋಂಕು ದೃಢ

Share

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್-19 ನಿಂದ ಇಬ್ಬರು ಮಹಿಳೆಯರು ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಐವರು ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಖಾಸಗಿ ಆಸ್ಪತ್ರೆ ವೈದ್ಯ ಸೇರಿದಂತೆ ಒಂದೇ ದಿನ 49 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 118 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 25 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 91 ಪ್ರಕರಣಗಳು ಸಕ್ರಿಯವಾಗಿವೆ ಎಂದು ಅವರು ತಿಳಿಸಿದರು.

ಕೋವಿಡ್ ಆಸ್ಪತ್ರೆಯ ಐ.ಸಿ.ಯು.ನಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಶಿಗ್ಗಾವಿ ದೇಸಾಯಿ ಓಣಿಯ 75 ವರ್ಷದ ಮಹಿಳೆ (ಪಿ-8295) ಜೂನ್ 20ರಂದು ಆಸ್ಪತ್ರೆಗ ದಾಖಲಾಗಿದ್ದು, ಜೂ.30ರ ಮಂಗಳವಾರ ಬೆಳಿಗ್ಗೆ 6.30ಕ್ಕೆ ಮರಣಹೊಂದಿದ್ದಾರೆ.

ಹಾವೇರಿ ತಾಲ್ಲೂಕು ಆಲದಕಟ್ಟಿ ಗ್ರಾಮದ ಬಸವೇಶ್ವರ ನಗರದ ನಿವಾಸಿ 60 ವರ್ಷದ ವೃದ್ಧೆ (ಪಿ-13268) ಕೆಮ್ಮು ಮತ್ತು ಜ್ವರದ ಹಿನ್ನೆಲೆಯಲ್ಲಿ ಜೂನ್ 24ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜೂನ್ 27ರಂದು ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಐ.ಸಿ.ಯು.ನಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೂ. 30ರ ಬೆಳಿಗ್ಗೆ 7.30ಕ್ಕೆ ಮರಣ ಹೊಂದಿದ್ದಾರೆ. ಎರಡು ಕುಟುಂಬಗಳಿಗೆ ಮಾಹಿತಿ ನೀಡಲಾಗಿದ್ದು, ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಹೇಳಿದರು‌.

49 ಪ್ರಕರಣ ದೃಢ:

ಜೂ.30 ರಂದು 49 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಶಿಗ್ಗಾವಿ ತಾಲ್ಲೂಕಿನ 27 ಜನರಿಗೆ, ಹಿರೇಕೆರೂರು ತಾಲ್ಲೂಕಿನ 15 ಜನರಿಗೆ, ಹಾನಗಲ್ ತಾಲ್ಲೂಕಿನ ನಾಲ್ವರಿಗೆ ಹಾಗೂ ಹಾವೇರಿ, ಸವಣೂರು, ರಾಣೆಬೆನ್ನೂರ ತಾಲ್ಲೂಕಿನ ತಲಾ ಒಬ್ಬರಿಗೆ ಸೇರಿದಂತೆ 49 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು.

ಸೋಂಕಿತರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಸಂಪರ್ಕದ ಪತ್ತೆ ಕಾರ್ಯ ಮುಂದುವರಿದಿದೆ. ಸೋಂಕಿತರ ವಾಸಿಸುವ 100 ಮೀಟರ್‌ ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಎಂದು ಪರಿವರ್ತಿಸಿದೆ. 200 ಮೀ. ವ್ಯಾಪ್ತಿಯನ್ನು ‘ಬಫರ್ ಜೋನ್’ ಎಂದು ಘೋಷಿಸಿದೆ. ಆಯಾ ತಾಲ್ಲೂಕಿನ ತಹಶೀಲ್ದಾರ್‌ಗಳನ್ನು ಇನ್ಸಿಡೆಂಟ್‍ಂಟಲ್ ಕಮಾಂಡರ್‌ಗಳಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್‌ ಸೋಂಕು ಪತ್ತೆ ಲ್ಯಾಬ್‌ ಕಾರ್ಯಾರಂಭ:

ಜಿಲ್ಲೆಯಲ್ಲಿ 19 ಖಾಸಗಿ ಆಸ್ಪತ್ರೆಗಳಿವೆ, ಸದರಿ ವೈದ್ಯರೊಂದಿಗೆ ಮಾತುಕತೆ ನಡೆಸಲಾಗಿದೆ. ಜಿಲ್ಲೆಯಲ್ಲೇ ಕೋವಿಡ್ ಮಾದರಿ ಪರೀಕ್ಷೆಗೆ ಲ್ಯಾಬ್ ಕಾರ್ಯ ಆರಂಭವಾಗಿದೆ. ಒಂದು ವಾರ ಕಿಮ್ಸ್‌ ವೈದ್ಯರು ಪರೀಕ್ಷೆಯ ಮೇಲುಸ್ತುವಾರಿ ವಹಿಸಲಿದ್ದಾರೆ. ನಂತರ ಸ್ವತಂತ್ರವಾಗಿ ಪರೀಕ್ಷೆ ನಡೆಯಲಿದೆ. ನಿಗದಿಯಂತೆ ದಿನಕ್ಕೆ 300ರಂತೆ ಸ್ಥಳೀಯವಾಗಿ ಗಂಟಲು ಮಾದರಿಯ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಗೆ ಸಂಬಂಧಪಟ್ಟ 1800 ಮಾದರಿಗಳ ವರದಿ ಲ್ಯಾಬ್‌ನಿಂದ ಬರಬೇಕಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಈವರೆಗೆ 31 ಕಂಟೈನ್‌ಮೆಂಟ್‌ ವಲಯಗಳಾಗಿ ಘೋಷಿಸಲಾಗಿದ್ದು, ಈ ಪೈಕಿ 13 ವಲಯಗಳನ್ನು ಡಿನೋಟಿಫೈ ಮಾಡಲಾಗಿದೆ. ಹೊಸದಾಗಿ ಇಂದು 10 ಕಂಟೈನ್‍ಮೆಂಟ್ ಜೋನ್ ಘೋಷಿಸಲಾಗಿದ್ದು, ಒಟ್ಟಾರೆ 28 ಕಂಟೈನ್‍ಮೆಂಟ್ ಜೋನ್‍ಗಳು ಮುಂದುವರಿದಿವೆ ಎಂದು ತಿಳಿಸಿದರು.