ಕೋವಿಡ್ ಸಂಕಷ್ಟ ಕಾಲದಲ್ಲಿ 2 ಲಕ್ಷ ಹೊಸ ರೈತರಿಗೆ ಕೃಷಿ ಸಾಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Share

ಹಾವೇರಿ: ಸಂಕಷ್ಟ ಕಾಲದಲ್ಲಿ ಸಹಕಾರ ಇಲಾಖೆ ರೈತರು ಹಾಗೂ ಆಶಾ ಕಾರ್ಯಕರ್ತೆಯರ ನೆರವಿಗೆ ನಿಂತು ಶ್ಲಾಘನೀಯ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಇಲಾಖೆ ಕೃಷಿ ಆರ್ಥಿಕ ಬೆಳವಣಿಗೆಯ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತ ಇಲಾಖೆಯಾಗಿದೆ. ಈ ಇಲಾಖೆಯನ್ನು ಸಹಕಾರಿ ಸಚಿವರಾದ ಸೋಮಶೇಖರ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರು, ಆಶಾ ಕಾರ್ಯಕರ್ತರ ನೆರವಿಗೆ ನಿಂತಿದ್ದಾರೆ.

ಸರ್ಕಾರಕ್ಕೆ 52 ಕೋಟಿ ರೂ. ನೆರವವನ್ನು ಸಹಕಾರಿ ವಲಯದಿಂದ ಸಂಗ್ರಹಿಸಿ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಸರ್ಕಾರದ ನೆರವು ಕೋರಿದರೆ ಸಹಕಾರ ಇಲಾಖೆ ಸರ್ಕಾರಕ್ಕೆ ನೆರವು ನೀಡಿದೆ. ಸಹಕಾರಿ ಕ್ಷೇತ್ರ ಸರ್ಕಾರದ ಕಾರ್ಯಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪ್ರಜಾಪ್ರಭುತ್ವದ ಉತ್ತಮ ಬೆಳೆವಣಿಗೆ ಎಂದು ಶ್ಲಾಘಿಸಿದರು.

ಸಹಕಾರ ಇಲಾಖೆಯಿಂದ ಕಳೆದ ವರ್ಷ 22.05 ಲಕ್ಷ ರೈತರಿಗೆ ರೂ.13.57 ಕೋರಿ ರೂ. ಕೃಷಿ ಸಾಲ ನೀಡಲಾಗಿತ್ತು. ಈ ವರ್ಷ 24.5 ಲಕ್ಷ ರೈತರಿಗೆ 14500 ಕೋಟಿ ರೂ. ಸಾಲ ನೀಡಿದೆ. ಕೋವಿಡ್ ಆರ್ಥಿಕ ಸಂಕಷ್ಟದಲ್ಲೂ 2 ಲಕ್ಷ ಹೊಸ ರೈತರಿಗೆ ಸಾಲ ನೀಡಿರುವುದು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ ರೈತರಪರ ಬದ್ಧತೆ ಹಾಗೂ ಸಹಕಾರಿ ಸಚಿವರ ರೈತಪರ ಕಾಳಜಿ ಕಾರಣವಾಗಿದೆ. ಇದು ನಮ್ಮ ಸರ್ಕಾರದ ಅದ್ಭುತ ಸಾಧನೆ ಬಣ್ಣಿಸಿದರು.

ಕೊರೊನಾ ಸಂದರ್ಭದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೂ 10 ಸಾವಿರ ರೂ. ಸಹಾಯಧನ ನೀಡಲು ನಮ್ಮ ಸರ್ಕಾರ ತೀರ್ಮಾನ ಕೈಗೊಂಡಿದೆ. ಕೋವಿಡ್‍ನ ಈ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ರಾಜ್ಯದ 41,500 ಆಶಾ ಕಾರ್ಯ ಕರ್ತೆಯರಿಗೆ ಸಹಕಾರಿ ಇಲಾಖೆ ವತಿಯಿಂದ ತಲಾ ಮೂರು ಸಾವಿರ ರೂ. ಪ್ರೋತ್ಸಾಹಧನ ನೀಡಲು 12 ಕೋಟಿ 7.5 ಲಕ್ಷ ರೂ. ಬಿಡುಗಡೆ ಮಾಡಿದೆ. ಆರ್ಥಿಕ ಇಲಾಖೆ ಮಾಡಬೇಕಾದ ಕಾರ್ಯವನ್ನು ಸಹಕಾರ ಇಲಾಖೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿದರು.

ಮೆಚ್ಚುಗೆ: ಆಶಾ ಕಾರ್ಯಕರ್ತರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗೃಹ ಸಚಿವರು ನಿಮ್ಮ ಕರ್ತವ್ಯ ನಿಷ್ಠೆ ಆಧರಣೀಯ. ಎಲ್ಲರಿಗೂ ಮಾದರಿ, ಶ್ಲಾಘನೀಯ. ನಿಮ್ಮ ಕೆಲಸವನ್ನು ಭಾರತದ ಪ್ರಧಾನಿಗಳು ಮೆಚ್ಚಿದ್ದಾರೆ. ಕೋವಿಡ್‍ನ ಎಲ್ಲ ಭಯಗಳನ್ನು ಮೆಟ್ಟಿ ನಿಂತು ದೇವಿಯ ಶಕ್ತಿ ರೂಪಿಗಳಾಗಿ ನೀವು ಕಾರ್ಯನಿರ್ವಹಿಸುತ್ತಿದ್ದಿರಿ. ನಿಮ್ಮ ಶಕ್ತಿಯನ್ನು ಲೆಕ್ಕವಿಡಲು ಸಾಧ್ಯವಿಲ್ಲ. ಅಪರಮಿತವಾದ ನಿಮ್ಮ ಶಕ್ತಿಗೆ ನಮ್ಮೆಲ್ಲರ ಮೆಚ್ಚುಗೆ ಇದೆ. ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲ ಆಶೋತ್ತರಗಳನ್ನು ಈಡೇರಿಸಲು ನಿಮ್ಮ ಕಾರ್ಯ ಸರ್ಕಾರಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಬೇಡಿಕೆ: ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಗೆ ಪ್ರತ್ಯೇಕವಾದ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಹಾಲು ಒಕ್ಕೂಟ ಅಗತ್ಯವಾಗಿದೆ. ಇದರಿಂದ ಜಿಲ್ಲಾವಾರು ಒಕ್ಕಲುತನ ಹಣಕಾಸಿನ ಯೋಜನೆಯನ್ನು ರೂಪಿಸಲು ನೆರವಾಗಲಿದೆ. ಧಾರವಾಡ ಡಿಸಿಸಿ ಬ್ಯಾಂಕ್‍ನ್ನು ವಿಭಜಿಸಿ ಧಾರವಾಡ, ಗದಗ ಹಾಗೂ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆರಂಭಿಸಬೇಕು. ಹಾಗೆಯೇ ಡೈರಿ ಕ್ಷೇತ್ರದ ಉತ್ತೇಜನಕ್ಕೆ ಪ್ರತ್ಯೇಕ ಕೆ.ಎಂ.ಎಫ್. ಸ್ಥಾಪನೆಯ ಬೇಡಿಕೆಯನ್ನು ಸಹಕಾರಿ ಸಚಿವರ ಮುಂದಿರಿಸಿದರು.