ಹಾವೇರಿ ಜಿಲ್ಲೆಗೆ ಮೇಘಾ ಡೈರಿ ಮಂಜೂರು-ಡಿಸಿಸಿ ಬ್ಯಾಂಕ್, ಕೆ.ಎಂ.ಎಫ್: ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ

Share

ಹಾವೇರಿ: ಜಿಲ್ಲೆಗೆ ನೂರಕ್ಕೆ ನೂರರಷ್ಟು ಮೇಘಾಡೈರಿ ಸ್ಥಾಪನೆ ಮಾಡಲಾಗುವುದು. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕೆ.ಎಂ.ಎಫ್ ಕುರಿತಂತೆ ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದ್ದು, ಸಚಿವ ಸಂಪುಟದಲ್ಲಿ ಚರ್ಚಿ ಕ್ರಮಕೈಗೊಳ್ಳಲಾಗುವುದು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ಚೆಕ್ ವಿತರಿಸಿ ಮಾತನಾಡಿದ ಅವರು, ಧಾರವಾಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಪ್ರತ್ಯೇಕಿಸಿ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಸ್ಥಾಪಿಸುವ ಕುರಿತಂತೆ ಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದೆ. ನಭಾರ್ಡ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಹಣಕಾಸು ವ್ಯವಸ್ಥೆ, ಜಮೀನಿನ ಲಭ್ಯತೆ ಸೇರಿದಂತೆ ಮೂರ್ನಾಲ್ಕು ಸಲಹೆಗಳನ್ನು ಕೇಳಿದ್ದಾರೆ. ಇದೇ ಜುಲೈ 2 ರಂದು ಮತ್ತೊಂದು ಸಭೆಯನ್ನು ನಡೆಸಲಾಗುವುದು. ಸಭೆಯಲ್ಲಿ ಅಂತಿಮ ನಿರ್ಣಯಕೈಗೊಂಡು ಸಚಿವ ಸಂಪುಟದ ಸಭೆಯ ಮುಂದೆ ತಂದು ಬ್ಯಾಂಕ್ ಸ್ಥಾಪನೆ ಕುರಿತಂತೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಗೆ ಮೇಘಾಡೈರಿಯನ್ನು ನೂರಕ್ಕೆ ನೂರರಷ್ಟು ಸ್ಥಾಪಿಸಲಾಗುವುದು. ಮೇಘಾಡೈರಿಯ ಪ್ರಸ್ತಾವನೆಯನ್ನು ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರಸ್ತಾಪ ಮಾಡಿದ್ದಾರೆ ಹಾಗೂ ಡಿಸಿಸಿ ಬ್ಯಾಂಕ್ ಕೆ.ಎಂ.ಎಫ್ ಸ್ಥಾಪನೆಗೆ ಬೇಡಿಕೆ ಸಲ್ಲಿಸಿದ್ದಾರೆ. ಗೃಹ ಸಚಿವರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಶೂನ್ಯ ಬಡ್ಡಿ ಸಾಲ: ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸಮಾಡುತ್ತಿದ್ದಾರೆ. ಇವರ ಸೇವೆಯನ್ನು ಮನ್ನಿಸಿ ಸಹಕಾರಿ ಇಲಾಖೆಯಿಂದ ರಾಜ್ಯದ ಎಲ್ಲ 41,500 ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂ. ನಂತೆ 12 ಕೋಟಿ 7.5 ಲಕ್ಷ ರೂ. ಪ್ರೋತ್ಸಾಧನ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ 18 ಜಿಲ್ಲೆಯ 14 ಸಾವಿರ ಆಶಾ ಕಾರ್ಯಕರ್ತೆಯರಿಗೆ 4 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು

ಆಶಾ ಕಾರ್ಯಕರ್ತರಿಗೆ ಆಥಿಕ ಬಲ ನೀಡುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಮಾದರಿಯಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರದೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಸ್ತ್ರೀ ಶಕ್ತಿ ಗುಂಪುಗಳ ರೀತಿಯಲ್ಲಿ ಆಶಾ ಕಾರ್ಯಕರ್ತೆಯರು ಸ್ವಯ ಸಹಾಯ ಗುಂಪುಗಳನ್ನು ರಚಿಸಿಕೊಂಡರೆ ಅವರಿಗೆ ಆರ್ಥಿಕ ನೆರವು ನೀಡಿ ಶಕ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.