ಹಾವೇರಿ: 12 ಜನರಿಗೆ ಕೋವಿಡ್ ಸೋಂಕು ದೃಢ

Share

ಹಾವೇರಿ: ಜಿಲ್ಲೆಯಲ್ಲಿ ಶನಿವಾರ 12 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 38 ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 17 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

P-6832ರ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ 11 ಜನರಿಗೆ ಹಾಗೂ P- 6252 ಸೋಂಕಿತೆಯ ಪ್ರಾಥಮಿಕ ಸಂಪರ್ಕದಿಂದ 85 ವರ್ಷದ P- 8296 ವೃದ್ಧೆ ಸೋಂಕು ದೃಢಪಟ್ಟಿದೆ. ಎಲ್ಲ ಸೋಂಕಿತರ ಗಂಟಲು ದ್ರವವನ್ನು ಜೂನ್ 17 ರಂದು ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 19ರ ರಾತ್ರಿ ಕೋವಿಡ್ ಸೋಂಕಿತರೆಂದು ಲ್ಯಾಬ್ ವರದಿ ಬಂದಕೂಡಲೇ ಎಲ್ಲ ಸೋಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.