ಕೋವಿಡ್ ಸೋಂಕಿತ ಶಿಗ್ಗಾಂವ ಪಿಗ್ಮಿ ಏಜೆಂಟ್ ಸಂಪರ್ಕಿತರು ಸ್ವಯಂ ಪರೀಕ್ಷೆಗೆ ಎ.ಸಿ. ಮನವಿ

Share

ಹಾವೇರಿ: ಜಿಲ್ಲೆಯ ಶಿಗ್ಗಾಂವ ಪಟ್ಟಣದ ಜಯನಗರ ನಿವಾಸಿ ಪಿಗ್ಮಿ ಏಜೆಂಟ್ P-9412 ಪುರುಷನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಕಳೆದ 10 ದಿನಗಳಿಂದ ಈಚೆಗೆ ಈತನ ಸಂಪರ್ಕಕ್ಕೆ ಬಂದವರು ಕೂಡಲೇ ಶಿಗ್ಗಾಂವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಫಿವರ್ ಕ್ಲಿನಿಕ್‍ಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಲು ಸವಣೂರು ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶಿಗ್ಗಾಂವ ಪಟ್ಟಣದ ಜಯನಗರ ನಿವಾಸಿಯಾದ ಸೋಂಕಿತ ವ್ಯಕ್ತಿ ಕಿತ್ತೂರಾಣಿ ಚೆನ್ನಮ್ಮ ಕ್ರೆಡಿಟ್ ಸೊಸೈಟಿಯ ಪಿಗ್ಮಿ ಸಂಗ್ರಹಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಜೊತೆಗೆ ಶಿಗ್ಗಾಂವನ ಎಸ್.ಎಂ.ಟ್ರೇಡರ್ಸ್ ಅವರು ಶಿಗ್ಗಾಂವ, ಹುಲಗೂರ ಹಾಗೂ ಬಂಕಾಪರ ಗ್ರಾಮಗಳ ಅಂಗಡಿಗಳಿಗೆ ಪೂರೈಸಿದ ಸಕ್ಕರೆಯ ಬಿಲ್ಲನ್ನು ಸಂಗ್ರಹಿಸಲು ಓಡಾಡಿದ ಪ್ರವಾಸ ಇತಿಹಾಸ ಹೊಂದಿದ್ದಾನೆ. ಈ ಸಂದರ್ಭದಲ್ಲಿ ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರೂ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.