ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಕಲ ಸಿದ್ಧತೆ: ತಾಲೂಕಿನ ಪ್ರತಿ ಸೆಂಟರ್‌ನಲ್ಲಿ ಹೆಲ್ತ್ ಕೌಂಟರ್, ಮಾರ್ಕಿಂಗ್ ವ್ಯವಸ್ಥೆ

Share

ಹಾವೇರಿ: ಜೂನ್ 25 ರಿಂದ ಜುಲೈ 04 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ತಾಲೂಕಾ ಆಡಳಿತ ಸನ್ನದ್ಧವಾಗಿದ್ದು, ತಾಲೂಕಿನ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಪ್ರಮಾಣಿಕೃತ ವಿಧಾನಗಳ ಮಾರ್ಗಸೂಚಿಯಂತೆ ಹೆಲ್ತ್‌ ಕೌಂಟರ್, ಮಾರ್ಕಿಂಗ್ ವ್ಯವಸ್ಥೆ ಕೈಗೊಂಡಿದ್ದು ನಿರಾತಂಕವಾಗಿ ವಿದ್ಯಾರ್ಥಿಗಳು ಪರೀಕ್ಷೆಯಲು ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಿದ್ದತೆ ಹಾಗೂ ಪ್ರಾಮಾಣಿಕೃತ ವಿಧಾನದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ನಗರದ ಲಯನ್ಸ್ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಹಾವೇರಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ 4216 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 114 ವಲಸೆ ಹೋದ ವಿದ್ಯಾರ್ಥಿಗಳು ಹಾಗೂ 115 ವಲಸೆ ಬಂದ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. 15 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. 260 ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. 13 ಕೇಂದ್ರಗಳಿಗೆ ಹಾಗೂ 208 ಕೊಠಡಿಗಳಿಗೆ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಸ್ಯಾನಿಟೈಸೇಷನ್ ವಿದ್ಯಾರ್ಥಿಗಳ ಗರಿಷ್ಠವಾದ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಎಲ್ಲ ಪರೀಕ್ಷಾ ಕೇಂದ್ರಗಳನ್ನು ಅಲಂಕೃತಗೊಳಿಸಿ ಹಬ್ಬದ ವಾತಾವರಣ ಸೃಷ್ಟಿ ಮಾಡಲಾಗಿದೆ. ಯಾವುದೇ ಕೋವಿಡ್ ಭಯವಿಲ್ಲದೇ ಎಲ್ಲ ವಿದ್ಯಾರ್ಥಿಗಳು ಸಂಭ್ರಮದಿಂದ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಸ್ವಾಗತಿಸಲಿದ್ದಾರೆ ಎಂದು ಅವರು ತಿಳಿಸಿದರು.

ಎಸ್.ಓ.ಪಿ ಮಾರ್ಗಸೂಚಿಯಂತೆ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಕೌಂಟರ್ ಸ್ಥಾಪಿಸಲಾಗಿದೆ. ಕೌಂಟರ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ವಿದ್ಯಾರ್ಥಿಗಳು ಬಂದು ಜ್ವರ ತಪಾಸಣೆಗೆ ಒಳಗಾಗಬೇಕು. ಈ ಉದ್ದೇಶಕ್ಕಾಗಿ ಪ್ರತಿ ಕೇಂದ್ರದ ಆವರಣದಲ್ಲಿ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಂಟೈನ್ಮೆಂಟ್ ಪ್ರದೇಶದಿಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಹಾಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಪ್ರತಿ ಕೊಠಡಿಯಲ್ಲಿ 16-18 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿದೆ, ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಕೊಠಡಿಯಲ್ಲಿ ಒಬ್ಬರಿಂದ ಒಂದು ಮೀಟರ್ ಅಂತರದಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದೆ ಎಂದರು.

ತಾಲೂಕಿನಲ್ಲಿ 19 ಮಾರ್ಗಸೂಚಕಗಳನ್ನು ವ್ಯವಸ್ಥೆಮಾಡಿ, ಪ್ರತಿ ಮಾರ್ಗಕ್ಕೆ ಒಂದರಂತೆ 19 ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. 20 ಖಾಸಗಿ ಶಾಲಾ ಬಸ್ ಪಡೆಯಲಾಗಿದೆ. ಪರೀಕ್ಷಾ ಸಮಯದಲ್ಲಿ ಯಾವುದಾದರು ಬಸ್ ಸಮಸ್ಯೆಯಾದರೆ ಐ.ಬಿ ಯಲ್ಲಿ ಒಂದು ಪ್ರತ್ಯೇಕ ಬಸ್ ಕಾಯ್ದಿರಿಸಲಾಗುತ್ತದೆ. ಕೆ.ಎಸ್.ಆರ್.ಟಿ.ಸಿ ನಿತ್ಯ ಮಾರ್ಗಗಳನ್ನು ಹೊರತುಪಡಿಸಿ ಹೆಚ್ಚುವರಿಯಾಗಿ 9 ಮಾರ್ಗಗಳಲ್ಲಿ ಬಸ್ ಸಂಚಾರ ವ್ಯವಸ್ಥೆ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಸುವ್ಯವಸ್ಥೆ, ಸಾಮಾಜಿಕ ಅಂತರ, ಸಾರ್ವಜನಿಕರಿಗೆ ನಿಯಂತ್ರಣ ಮಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ತಾಲೂಕ ಆಡಳಿತ, ಶಿಕ್ಷಣ ಸಚಿವರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪರೀಕ್ಷೆ ನಡೆಸಲು ನಮ್ಮ ತಂಡ ಸಿದ್ಧತೆ ಮಾಡಿಕೊಂಡಿದೆ ಎಂದು ವಿವರಿಸಿದರು.

ತಾಲೂಕ ಆರೋಗ್ಯಾಧಿಕಾರಿ ಪ್ರಭಾಕರ್ ಕುಂದೂರ, ಬಿ.ಆರ್.ಸಿ ಸಮನ್ವಯಾಧಿಕಾರಿ ಅಶೋಕ ಭಗವಂತಗೌಡರ, ಲಯನ್ಸ್ ಪ್ರೌಢಶಾಲೆಯ ಚೆರಮನ್‍ರಾದ ಎಸ್.ಕೆ ಮುದಗಲ್, ಲಯನ್ಸ್ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸಿ.ಐ ಕುನ್ನೂರ, ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಎನ್.ಐ,ಇಚ್ಚಂಗಿ, ತಾಲೂಕ ನೋಡಲ್ ಅಧಿಕಾರಿ ಆನಂದ ಉರ್ಮಿ, ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಸಿದ್ಧರಾಜು ಎಲ್ ಸೇರಿದಂತೆ ಮತ್ತಿತರರು ಇದ್ದರು.