ಸ್ವಯಂ ಪ್ರೇರಿತರಾಗಿ ಎಲ್ಲರೂ ರಕ್ತದಾನ ಮಾಡಬೇಕು: ಡಾ.ರಾಜೇಂದ್ರ ದೊಡ್ಡಮನಿ

Share

ಹಾವೇರಿ: ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತದಾನದಿಂದ ಒಂದು ಜೀವ ಉಳಿಸಬಹುದಾಗಿದೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಹೇಳಿದರು.

ನಗರದ ಕೆ.ಎಲ್.ಇ. ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾಯ ಎಲ್ಲಾ ಪದವಿ ಮತ್ತು ವೃತ್ತಿಪರ ಕಾಲೇಜುಗಳ ಎನ್.ಎಸ್.ಎಸ್. ಮತ್ತು ರೆಡ್ ರಿಬ್ಬನ್ ಕ್ಲಬ್‍ಗಳು, ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಹಾವೇರಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನ ಹಾಗೂ ರಕ್ತದಾನ ಶಿಬಿರ ಮತ್ತು ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಸಾಕಷ್ಟು ಜನರು ರಕ್ತದಾನ ಮಾಡುತ್ತಿದ್ದಾರೆ. ಇದರಿಂದ ಹಲವರ ಜೀವರ ರಕ್ಷಣೆ ಸಾಧ್ಯವಾಗಿದೆ. ಯುವಕರು ರಕ್ತದಾನಕ್ಕೆ ಮುಂದಾಗಬೇಕು, ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಿಷ್ಠರಾಗಿರಬೇಕು. ಪ್ರಸ್ತುತ ದಿನಮಾನಗಳಲ್ಲಿ ಯುವಜನತೆಗೆ ಆರೋಗ್ಯದ ಬಗ್ಗೆ ಮಾರ್ಗದರ್ಶನ ಅವಶ್ಯಕತೆಯಿದೆ. ಯುವಕರು ಈ ದೇಶದ ಬೆನ್ನೆಲುಬು ಆಗಿದ್ದಾರೆ ಎಂದು ಹೇಳಿದರು.

ಜಿಲ್ಲಾಸ್ಪತ್ರೆಯ ರಕ್ತಭಂಡಾದ ವೈದ್ಯಾಧಿಕಾರಿ ಡಾ.ಬಸವರಾಜ್ ತಳವಾರ ಅವರು ಮಾತನಾಡಿ, ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಬದಲಾಗಿ ನಮ್ಮಲ್ಲಿರುವ ಅನೇಕ ರೋಗಗಳ ಮುಕ್ತಿಗೆ ಸಹಾಯಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಸ್ತುತದಲ್ಲ್ಲಿ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಗಳಲ್ಲಿ ಸುಮಾರು 20ರಷ್ಟು ಜನರಿಗೆ ರಕ್ತದಾನದ ಅವಶ್ಯವಿರುತ್ತದೆ.ಆದ್ರೆ ರಕ್ತದಾನ ಮಾಡುವವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ಯುವಕ/ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ನಾಯಕತ್ವ ಬೆಳೆಸಿಕೊಳ್ಳಬೇಕು. ಜತೆಗೆ ರಕ್ತದಾನಿಗಳು 45ಕೆ.ಜಿ.ಮೆಲ್ಪಟ್ಟವರಾಗಿ, ದೈಹಿಕ, ಮಾನಸಿಕವಾಗಿ ಸಧೃಡವಾಗಿರಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಕ್ಷಯರೋಗ ಹಾಗೂ ಎಡ್ಸ್ ನಿಯಂತ್ರಣಾಧಿಕಾರಿ ಡಾ.ನೀಲೇಶ್.ಎಂ.ಎನ್.ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಹೆಚ್.ಐ.ವಿ.ಬಾಧಿತರ ಉಪಚಾರಕ್ಕಾಗಿ ಆರ್ಟ್ ಸೆಂಟರ್, 11ಕಡೆ ಲಿಂಕ್ ಆರ್ಟ್ ಸೆಂಟರ್ ಹಾಗೂ 81 ಸಂಸ್ಥೆಗಳಲ್ಲಿ ಕೌನ್ಸಿಲ್ ಕೇಂದ್ರಗಳನ್ನು ತೆರೆಯಲಾಗಿದೆ. ಸಂತ್ರಸ್ಥರು ಸಂಸ್ಥೆಗಳಿಗೆ ನೇರವಾಗಿ ಭೇಟಿ ನೀಡಬಹುದು ಅಥವಾ ದೂ.ಸಂಖ್ಯೆ 104ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.ಸರ್ಕಾರದ ಹಲವಾರು ಮುಂಜಾಗ್ರತಾ ಕ್ರಮಗಳಿಂದ ಎಚ್.ಐ.ವಿ.ಹಾಗೂ ಏಡ್ಸ್ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಬಿ.ಚನ್ನಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಯ ಅಂಗವಾಗಿ ಭಿತ್ತಿಚಿತ್ರಗಳನ್ನು ಉದ್ಘಾಟಿಸಿಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಜಂತು ಹುಳು ಮಾತ್ರಗಳನ್ನು ವಿತರಿಸಲಾಯಿತು.

ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನ ಹಾಗೂ ರಕ್ತದಾನ ಶಿಬಿರ ಅಂಗವಾಗಿ ಆಯೋಜಿಸಿದ್ದ ಭಿತ್ತಿಚಿತ್ರಸ್ಪರ್ಧೇಯಲ್ಲಿ ವಿಜೇತರಾದ ಹಾನಗಲ್ಲಿನ ಎಸ್.ಕೆ.ಸಿ.ಇ. ಕಾಲೇಜಿನ ವಿದ್ಯಾರ್ಥಿನಿಯರಾದ ಮಮತಾ.ಯು. (ಪ್ರಥಮ), ಲಾವಣ್ಯ ಎಸ್.ಡಿ. (ದ್ವೀತಿಯ) ಹಾಗೂ ಹಾವೇರಿಯ ಟಿ.ಎಮ್.ಎ.ಇ.ಎಸ್. ಬಿ.ಪಿ.ಎಡ್.ಕಾಲೇಜಿನ ವಿದ್ಯಾರ್ಥಿ ಮಹ್ಮದ್‍ಅಲಿ ಸಂಕ್ಲಿಪುರ (ತೃತೀಯ) ಇವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದರು.

ಜಿಲ್ಲೆಯಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಹಾವೇರಿಯ ವಿಜಯ ದೇವರಗುಂಡಿಮಠ, ಗುರು ಎಂ ಕೆಂಣ್ಣನವರ ಹಾಗೂ ದೇವಗಿರಿಯ ಗೀರಿಶ ವೈ ಕುಲಕರ್ಣಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಉಪನ್ಯಾಸಕ ದಿವಾಕರ ಕಮ್ಮಾರ, ಸುಧಾಕರ, ಸುಣಗಾರ ಮತ್ತಿತರರು ಉಪಸ್ಥಿತರಿದ್ದರು.