ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ: ಬಸವಶಾಂತಲಿಂಗ ಶ್ರೀ

Share

ಹಾವೇರಿ: ಸಮಾಜ ಸೇವೆಗಳಲ್ಲಿ ತನು, ಮನದ ಸೇವೆಗಳು ಶ್ರೇಷ್ಠತೆ ಪಡೆದುಕೊಂಡಿದ್ದು, ಪ್ರತಿಯೊಬ್ಬರೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಕೊಸಿಕೊಂಡು ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕೆಂದು ಬಸವ ಕೇಂದ್ರ ಹೊಸಮಠದ ಬಸವಶಾಂತಲಿಂಗ ಶ್ರೀ ಹೇಳಿದರು.

ನಗರದ ಹೊಸಮಠದಲ್ಲಿ ಗುರುವಾರ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಎನ್‌ಎಸ್‌ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮ ಜೀವನದಲ್ಲಿ ಆಸ್ತಿ, ಅಂತಸ್ತು, ಐಶ್ವರ್ಯ ಯಾವುದು ಶಾಶ್ವತವಲ್ಲ. ಸಮಾಜದಲ್ಲಿ ಬದುಕಿರುವಷ್ಟು ದಿನ ಮನುಕುಲದ ಸೇವೆಗೆ ಸಿದ್ಧರಾಗಿರಬೇಕು. ನಾವು ಯಾವುದೇ ವೃತ್ತಿಯಲ್ಲಿ ಇದ್ದರೂ ವೃತ್ತಿಗೆ ನ್ಯಾಯ ದೊರಕಿಸುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.

ಪ್ರತಿಯೊಬ್ಬರು ಧನ(ಹಣ)ವಿದ್ದರೇ ಮಾತ್ರ ಸೇವೆ ಮಾಡಬಹುದು ಎಂಬ ಮನೋಭಾವನೆಯಿಂದ ಹೊರಬಂದು, ತನು, ಮನ ಸೇವೆ ಸಲ್ಲಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು. ಸಮಾಜದಲ್ಲಿ ಒಳ್ಳೆಯ ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ವ್ಯಕ್ತಿಯೇ ಇರಬೇಕು ಅಂತಿಲ್ಲ. ಅವರ ವ್ಯಕ್ತಿತ್ವ ಇದ್ದರೆ ಸಾಕು. ಇದಕ್ಕೆ ಬೆಂಗಳೂರಿನ ಮನೋಹರ ಮಣೋಹತ್ ಅವರು ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿ ಎಂಬ ಕಾರಣಕ್ಕೆ ರಾಜ್ಯದ ನೂರಾರು ಶಾಲೆಗಳ ವಿದ್ಯಾರ್ಥಿಗಳಿಗೆ ಅವರು ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮನೋಹರ ಮಣೋಹತ್ ಅವರು ವಿತರಿಸುತ್ತಿರುವ ನೋಟ್‌ಬುಕ್‌ಗಳ ಮೇಲೆ ಉತ್ತಮ ಸಂದೇಶವಿದ್ದು, ಇದು ವಿದ್ಯಾರ್ಥಿಗಳಲ್ಲಿ ಪ್ರೇರಣೆ ಮೂಡಿಸುವಂತಿದೆ. ಆದರೆ ಇತ್ತೀಚೆಗೆ ಸಿನಿಮಾ ನಟ, ನಟಿಯರ ಪೋಸ್ಟರ್‌ಗಳ ನೋಟ್‌ಬುಕ್ ಮಾರುಕಟ್ಟೆಗೆ ಬಂದಿದ್ದು, ಇದು ವಿದ್ಯಾರ್ಥಿಗಳ ಭಾವನೆಗಳ ಮೇಲೆ ಪರಿಣಾಮ ಬೀರುತ್ತಿವೆ. ಆದ್ದರಿಂದ ನೋಟ್‌ಬುಕ್‌ಗಳ ಮೇಲೆ ಒಳ್ಳೆಯ ಸಂದೇಶಗಳನ್ನು ಮುದ್ರಿಸುವ ಕಾರ್ಯವಾಗಬೇಕು. ವಿದ್ಯಾರ್ಥಿಗಳು ನೋಟ್‌ಬುಕ್‌ಗಳ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಗುರಿ ಸಾಧಿಸಬೇಕು ಎಂದರು.

ಬಸವರಾಜ ಹಾದರಗೇರಿ ಮಾತನಾಡಿ, ಸಮಾಜದ ಬಡ ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿ ಎಂಬ ಉದ್ದೇಶದಿಂದ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ಜೀವನದಲ್ಲಿ ಸಾಧನೆ ತೋರಬೇಕು ಎಂದರು. ಈ ಸಂದರ್ಭದಲ್ಲಿ ಹೊಸಮಠದ ವಿದ್ಯಾರ್ಥಿಗಳಿಗೆ ಶ್ರೀಗಳು ಸಾಂಕೇತಿಕವಾಗಿ ನೋಟ್‌ಬುಕ್‌ಗಳನ್ನು ವಿತರಿಸಿದರು.

ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಎಂ.ವಿ.ಕುಲಕರ್ಣಿ ಉಪನ್ಯಾಸಕರಾದ ಎಚ್.ಜಿ.ಮುಳಗುಂದ, ಎಂ.ಕೆ.ಮತ್ತಿಹಳ್ಳಿ, ಸೀಮಾ ಕುರಾಂದ್ವ, ಎಸ್.ಎಂ.ತೆಂಗಿನಕಾಯಿ ಸೇರಿದಂತೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.