‘ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ’

Share

ಹಾವೇರಿ: ಮಹಾಪುರುಷರ ಆದರ್ಶ ಹಾಗೂ ಸಜ್ಜನರ ಸಂಘ ಮಾಡುವುದರಿಂದ ಬದುಕು ಹಸನಾಗುತ್ತದೆ ಎಂದು ಬಸವಕೇಂದ್ರ ಹೊಸಮಠದ ಬಸವಶಾಂತಲಿಂಗ ಶ್ರೀ ಹೇಳಿದರು.

ನಗರದ ಬಸವಕೇಂದ್ರ ಹೊಸಮಠದಲ್ಲಿ ಶುಕ್ರವಾರ ಸಂಜೆ ಜರುಗಿದ ಶರಣ ಸಂಜೆ ಕಾರ್ಯಕ್ರಮದ ಸಾನಿದ್ಯವಹಿಸಿ ಅವರು ಮಾತನಾಡಿದರು.

ಸಾರ ಸಜ್ಜನರ ಸಂಗ ಲೇಸು ಕಂಡಯ್ಯ ದೂರ ದುರ್ಜನರ ಸಂಗ ಭಂಗವಯ್ಯ ಎಂದು ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ. ಮನುಷ್ಯ ತನ್ನ ನಿರಂತರ ಬದುಕಿನಲ್ಲಿ ಸಜ್ಜನರ ಸಂಘದ ಒಡನಾಟದಲ್ಲಿ ಇದ್ದಾಗ ಬದುಕು ಹೆಜ್ಜೇನು ಸವಿದಂತೆ ಆಗುತ್ತದೆ. ಮಾನವನ ಬದುಕಿನ ಬದಲಾವಣೆಗೆ ಸಚ್ಚಿಂತನೆ ಬೇಕು ಎಂದರು.

ಬಸವಾದಿ ಶರಣರು ಅನುಭವ ಮಂಟಪ ಮೂಲಕ ಸಮಾಜವನ್ನು ಸಜ್ಜನರ ಸಮಾಜವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದಾರೆ. ದುರ್ಜನರ ಸಂಘದಿಂದ ದುರ್ನಡತೆ, ದುರ್ಗುಣ ಭಾವನೆಗಳು ಸ್ವಾರ್ಥದ ಮನೋಭಾವನೆ ಬೆಳೆಯುವಂತೆ ಮಾಡುತ್ತದೆ. ಸಜ್ಜನರ ಒಡನಾಟದಿಂದ ಸದ್ಗುಣ, ಸದ್ಭಾವನೆ ಸದು ವಿನಯ, ಸಮಾಧಾನ ಶಾಂತಿಯನ್ನು ನೀಡುತ್ತದೆ ಎಂದು ಹೇಳಿದರು.

ಮಾನವ ಶ್ರೇಷ್ಟವಾದ, ಆಧ್ಯಾತ್ಮಿಕವಾದ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವ ಹಂತದಲ್ಲಿ ನಾವು ಶಿಲಾಮಂಟಪದ ಒಳಗೆ ಭಕ್ತರನ್ನು ನೋಡಲು ಸಾಧ್ಯವಾಗುವುದಿಲ್ಲವೋ ಅದು ಸ್ಥಾವರವಾಗುತ್ತದೆ. ನಾವು ಜಂಗಮತ್ವದ ಕಡೆಗೆ ಸಾಗುವ ಮೂಲಕ ಸಮಾಜದಲ್ಲಿ ಕಲ್ಯಾಣ ರಾಜ್ಯ ನಿರ್ಮಿಸಬೇಕು ಎಂದರು.

ಪ್ರತಿಯೊಬ್ಬರ ಜೀವನ ನಿರ್ವಹಣೆ ಅವರವರ ಕೈಯಲ್ಲಿದೆ. ದಾರ್ಶನಿಕರ ತತ್ವ ಅಳವಡಿಸಿಕೊಂಡು ಇರುವಷ್ಟು ದಿನ ಆರೋಗ್ಯಪೂರ್ಣವಾಗಿ ಬದುಕಬೇಕು ಎಂದು ಹೇಳಿದರು.

ಗುರುಮಹಾಂತಯ್ಯ ಶಾಸ್ತ್ರಿಗಳು ಉಪನ್ಯಾಸ ನೀಡಿದರು. ಬಿ.ಮಂಜುನಾಥ್, ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ್ ಶಿಶುನಳ್ಳಿ, ಡಾ ಬಸವರಾಜ್ ವೀರಾಪುರ, ಶ್ರೀಧರ್ ದೊಡ್ಡಮನಿ, ನಗರಾಭಿವೃದ್ಧಿ ಅಧ್ಯಕ್ಷ ಶಿವಕುಮಾರ್ ಸಂಗೂರು ಸೇರಿದಂತೆ ಇತರರು ಇದ್ದರು.