ಷಟಸ್ಥಳ ಮಾರ್ಗ ಅನುಸರಿಸುವೆಕೆಯಿಂದ ಲಿಂಗಾಂಗ ಸಾಮರಸ್ಯ ಸಾಧ್ಯ: ಸದಾಶಿವ ಶ್ರೀ

Share

ಹಾವೇರಿ: ಸಮಾಜಕ್ಕೆ ಸನ್ಮಾರ್ಗ ತೋರಿಸುವ ಗುರು ಶರಣ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ಷಟಸ್ಥಳ ಮಾರ್ಗಗಳನ್ನು ಅನುಸರಿಸಬೇಕು. ಅಂದಾಗ ಮಾತ್ರ ಲಿಂಗಾಂಗ ಸಾಮರಸ್ಯ ಸಾಧಿಸಬಹುದು ಎಂದು ಹುಕ್ಕೇರಿಮಠದ ಸದಾಶಿವ ಶ್ರೀ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಶಿವಬಸವ ಸ್ವಾಮಿಗಳ 75ನೇ ಹಾಗೂ ಶಿವಲಿಂಗ ಶ್ರೀಗಳ 12ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ‘ನಮ್ಮೂರು ಜಾತ್ರೆ’ ನಿಮಿತ್ತ ಷಟಸ್ಥಳ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

‘ಶರಣ ಸಂಸ್ಕೃತಿಯಲ್ಲಿ ಷಟಸ್ಥಳಗಳು ಅವಿಭಾಜ್ಯ ಅಂಗಗಳಾಗಿದ್ದು, ಇದು ಆತ್ಮೋನ್ನತಿಗೆ ಮಾರ್ಗದರ್ಶನವಾಗಿವೆ. ಸಾಮಾನ್ಯ ಸಾಧಕನಿಂದ ಅಸಾಮಾನ್ಯ ಶಿವಯೋಗಿವರೆಗೆ ದಿವ್ಯ ಬೆಳಕನ್ನು ನೀಡುವ ಚಿಂತಾಮಣಿಯಾಗಿದೆ ಎಂದು ಹೇಳಿದರು.

‘12ನೇ ಶತಮಾನದಲ್ಲಿ ಶಿವಶರಣರು ಲಿಂಗಾಂಗ ಸಾಮರಸ್ಯಕ್ಕೆ ಷಟಸ್ಥಳವೇ ಮಾರ್ಗ ಎಂದು ಪ್ರತಿಪಾದಿಸಿದ್ದು, ಸಾಮಾನ್ಯನು ಭಕ್ತನಾಗಿ, ಮಹೇಶನಾಗಿ, ಪ್ರಸಾದಿಯಾಗಿ, ಪ್ರಾಣಲಿಂಗಿಯಾಗಿ, ಶರಣನಾಗಿ ಐಕ್ಯನಾಗುತ್ತಾನೆ. ಇಂಥ ಕ್ರಮಸಮುಚ್ಚಯವನ್ನು ಎಲ್ಲ ಬಸವಾದಿ ಶರಣರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು’ ಎಂದು ಹೇಳಿದರು.

ಶಿವಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಎಸ್.ಎಸ್. ಮುಷ್ಠಿ, ವೀರಣ್ಣ ಅಂಗಡಿ, ಪಿ.ಡಿ.ಶಿರೂರ, ಎಂ.ಎಸ್. ಕೋರಿಶೆಟ್ಟರ, ತಮ್ಮಣ್ಣ ಮುದ್ದಿ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವಯೋಗಿ ವಾಲಿಶೆಟ್ಟರ, ಶಿವಯೋಗಿ ಯರೇಶಿಮಿ, ಬಿ.ಎಸ್. ಸಾವಿರಮಠ, ಎಸ್.ಎಂ. ಕಡೇಮನಿ, ಡಾ.ಬಸವರಾಜ ವೀರಾಪುರ, ಜಗದೀಶ ತುಪ್ಪದ ಇದ್ದರು.