ವಿವೇಕಾನಂದರ ಸಂದೇಶ ಅಮರ: ನಗರಸಭಾಧ್ಯಕ್ಷ ಸಂಜೀವಕುಮಾರ ನೀರಲಗಿ

Share

ಹಾವೇರಿ: ಯುವಕರೆ ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ಮುನ್ನುಗ್ಗಿರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅಮರ ವಾಕ್ಯವಾಗಿಯೇ ಉಳಿದಿದೆ ಎಂದು ನಗರಸಭಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ದೇಶ ಮೊದಲು, ಆನಂತರ ನಾವು ಎಂದು ದೇಶವನ್ನೇ ತಮ್ಮ ಸರ್ವಶ್ವ ವನ್ನಾಗಿಸಿಕೊಂಡಿದ್ದರು. ಭಾರತ ದೇಶದ ಪರಂಪರೆಯನ್ನು ವಿಶ್ವದೆಲ್ಲೆಡೆ ಸಾರಿದ ಸ್ವಾಮಿ ವಿವೇಕಾನಂದರು, ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು ಎಂದು ಹೇಳಿದರು.

ಯುವ ಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದ ಅವರು ಯುವ ಶಕ್ತಿಯೇ ಈ ದೇಶದ ಆಸ್ತಿ ಎಂದಿದ್ದರು. ಅಂತಹ ಯುವ ಶಕ್ತಿಯನ್ನು ಅತಿ ಹೆಚ್ಚು ಪಡೆದಿರುವ ಭಾರತ ದೇಶವು ತನ್ನ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಬೇಕಾದ ಸಮಯ ಬಂದಿದೆ ಎಂದು ತಿಳಿಸಿದರು.

ಶಿಕ್ಷಕ ಚಿದಾನಂದ ಜಡಿಮಠ ಮಾತನಾಡಿ, ಸ್ವಾಮಿ ವಿವೇಕಾನಂದರು ಭ್ರಾತೃತ್ವ ಮತ್ತು ಸೋದರತ್ವವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿ ಭಾರತ ದೇಶ ವಿಶ್ವಗುರು ಆಗಬೇಕೆಂದಿದ್ದರು. ಅವರ ಮಾರ್ಗದರ್ಶನದಲ್ಲಿ ಅವರ ತತ್ವ ಮೈಗೂಡಿಸಿಕೊಂಡು ಯುವಕರೆಲ್ಲರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಅಧ್ಯಕ್ಷ ಕೊಟ್ರೇಶ ವಿಜಾಪುರ, ಎನ್.ಎಸ್‌‌. ಬಿಸ್ಟನಗೌಡ್ರ, ಎಸ್. ಎನ್ ಮೈಸೂರ ಸೇರಿದಂತೆ ಇತರರು ಇದ್ದರು.