ಮುಕ್ತ ಮನಸ್ಸು ಹೊಂದಿದರೆ ಮಾತ್ರ ವಿಶ್ವ ಸಮಾನತೆ ಕಾಣಬಹುದು: ನ್ಯಾಯಾಧೀಶೆ ಎಸ್.ಎಚ್.ರೇಣುಕಾದೇವಿ

Share

ಹಾವೇರಿ: ಮಾನವ ಜಾತಿ, ಧರ್ಮ, ಸಮುದಾಯಕ್ಕೆ ಸಿಮಿತರಾಗಿರದೆ ಮುಕ್ತ ಮನಸ್ಸಿಗರಾಗಿ ಬೆಳೆದಾಗ ಮಾತ್ರ ವಿಶ್ವದ ಸಮಾನತೆ ಕಾಣಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಹೆಚ್.ರೇಣುಕಾದೇವಿ ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಇವರುಗಳ ಸಹಯೋಗದಲ್ಲಿ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಗುರುವಾರ ನಡೆದ ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ ಪ್ರಯುಕ್ತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ(ಬಡತನ ನಿರ್ಮೂಲನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ) ಯೋಜನೆ 2015ರ ಮತ್ತು ಮೂಲಭೂತ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿಗೆ ಯುವತಿಯರ ಮೇಲಾಗುತ್ತಿರುವ ಆ್ಯಸಿಡ್ ದಾಳಿ ಪ್ರಕರಗಳಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿ ಭಾಗಿಗಳಾಗುತ್ತಿದ್ದಾರೆ. ವಿದ್ಯೆಯನ್ನು ಅರಸಿ ಬಂದ ವಿದ್ಯಾರ್ಥಿಗಳು ಸಮಾಜದಲ್ಲಿ ಗಲಭೆಯನ್ನುಂಟು ಮಾಡುವ ಕೆಲಸಕ್ಕೆ ಮುಂದಾಗಬಾರದು. ವಿದ್ಯಾರ್ಥಿಗಳು ಗುಟಕಾ, ತಂಬಾಕು, ಮದ್ಯ ವ್ಯಸನಗಳಿಂದ ದೂರವಿರಿ. ಸಮಾಜಕ್ಕೆ ಕೊಡುಗೆಯನ್ನು ನೀಡುವ ಉತ್ತಮ ಪ್ರಜೆಗಳಾಗಿ ಬದುಕಿ ಹಾಗೂ ಇತರರಿಗೂ ಬದುಕಲು ಬಿಡಿ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅವರು ಮಾತನಾಡಿ, ಭಾರತದ ಪ್ರತಿಯೊಬ್ಬ ಪ್ರಜೆಗೂ ತಾನು ಹುಟ್ಟಿನ ನೆಲದ ಕಾನೂನಿನ ಬಗ್ಗೆ ಅರಿವಿರಬೇಕು. ನಮಗೆ ಕಾನೂನಿನ ಅರಿವಿಲ್ಲವೆಂದು ಒಂದು ವೇಳೆ ತಪ್ಪು ಮಾಡಿದ್ದಲ್ಲಿ ಅವರಿಗೆ ಕ್ಷಮೆ ಇರುವುದಿಲ್ಲ. ನಮ್ಮ ಒಳಿತಿಗೋಸ್ಕರ ನಾವೇ ರಚನೆ ಮಾಡಿಕೊಂಡಿರುವ ಕಾನೂನು ಗೌರವಿಸಿ ಪರಿಪಾಲನೆ ಮಾಡಬೇಕು ಎಂದು ಹೇಳಿದರು.

ಕಾಲೇಜಿನ ಅಥವಾ ನಿಮ್ಮ ಊರಿನ ಸುತ್ತ-ಮುತ್ತ ನಿಮಗೆ ಗೊತ್ತಿರುವ ಯಾವುದೇ ತಪ್ಪುಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬಹುದು. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಎಂದರು.

ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಮಾತನಾಡಿ, ಇತ್ತ್ತೀಚಿಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿಗುತ್ತಿರುವುದರಿಂದ ಶೇ.10ರಷ್ಟು ಪ್ರಮಾಣ ರಸ್ತೆ ಅಪಘಾತ ಕಡಿಮೆ ಮಾಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಆದರೆ ರಸ್ತೆ ಅಪಘಾತ ತಡೆಗೆ ರೂಪಿಸಲಾದ ನಿಯಮಗಳನ್ನು ಯಾರು ಸರಿಯಾಗಿ ಪಾಲಿಸುತ್ತಿಲ್ಲ. ಇಬ್ಬರು ಪ್ರಯಾಣಿಸಬೇಕಾದ ಬೈಕ್‍ಗಳಲ್ಲಿ ನಾಲ್ಕೈದು ಜನರು ಹೆಲ್ಮೇಟ್ ಇಲ್ಲದೆ ಪ್ರಯಾಣಿಸುತ್ತಾರೆ. ಬಡತನ ನಿರ್ಮೂಲನೆಗೆಂದು ಸರ್ಕಾರ ಅನೇಕ ಯೋಜನೆಗಳನ್ನು ಮನೆ ಬಾಗಿಲಿಗೆ ತಂದಿಡುತ್ತಿದೆ. ಯೋಜನೆಗಳ ಸದ್ಬಳಕೆಯ ಕುರಿತು ಪೋಷಕರಿಗೆ, ಅಕ್ಕ-ಪಕ್ಕದವರಿಗೆ ಮಾಹಿತಿ ನೀಡುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಶ್ರೀವಿದ್ಯಾರವರು ಪ್ರಾಸ್ತಾವಿಕ ಮಾತನಾಡಿದರು. ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಬಡತನ ನಿರ್ಮೂಲನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ) ಯೋಜನೆ 2015ರ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನೆಲ್ ವಕೀಲರಾದ ಎಸ್.ಎಸ್. ಸಣ್ಣತಮ್ಮನವರ ಹಾಗೂ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನೆಲ್ ವಕೀಲರಾದ ರಾಜೇಶ್ವರಿ ಚಕ್ಕಲೇರ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಎಂ.ಬೆನ್ನೂರ, ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಟಿ.ಲಮಾಣಿ ಇತರರು ಹಾಜರಿದ್ದರು. ಇದೇ ವೇಳೆ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗುಟಕಾ, ತಂಬಾಕು ಮುಕ್ತರಾಗುವಂತೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.