ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಎಸ್ಎಫ್ಐ ಪ್ರತಿಭಟನೆ

Share

ಹಾವೇರಿ: ಮಹಿಳೆಯರ ಮೇಲಿನ ಆತ್ಯಾಚಾರ, ದೌರ್ಜನ್ಯ ತಡೆಗಟ್ಟುವುದರ ಜತೆಗೆ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಭಾರತ್ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸದಸ್ಯರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತಾನಾಡಿ ದೇಶದಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಭದ್ರತೆ, ರಕ್ಷಣೆ ಇಲ್ಲದೆ ಇರುವುದರಿಂದ ಅತ್ಯಾಚಾರ, ದೌರ್ಜನ್ಯ, ಶೋಷಣೆ, ಲೈಂಗಿಕ ಪ್ರಕರಣಗಳು ದಿನೇ ದಿನೇ ಹೆಚ್ಚುಗುತ್ತಿವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು. ಆದರೆ, ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿಲ್ಲ. ತಕ್ಷಣ ಸಮಿತಿ ರಚನೆ ಮಾಡುವ ಮೂಲಕ ಮಹಿಳೆಯರ ಲೈಂಗಿಕ ದೌರ್ಜನ್ಯ ತಡೆಯಬೇಕೆಂದು ಆಗ್ರಹಿಸಿದರು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ಜಿಲ್ಲೆಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚುತ್ತಲಿವೆ. ಇಂತಹ ಆರೋಪಿಗಳಿಗೆ ಕಾನೂನು ಕಠಿಣ ಶಿಕ್ಷೆ ವಿಧಿಸಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಎಸ್ಎಫ್ಐ ರಾಣೇಬೆನ್ನೂರ ತಾಲ್ಲೂಕ ಅಧ್ಯಕ್ಷೆ ಜ್ಯೋತಿ ಪೋಲಿಸಗೌಡರು, ಮುಖಂಡರಾದ ಶ್ರೀಕಾಂತ್ ಬಾರ್ಕಿ, ಅರುಣ್ ಆರೇರ್, ನಿಯಾಜ್, ಪ್ರಸನ್ನ ಕಡಕೋಳ, ಚಿನ್ನು ಹಾವೇರಿ, ಪವಿತ್ರ ಎಚ್, ಸುಷ್ಮಾ ಎನ್.ಎಸ್, ಜ್ಯೋತಿ ಅರ್ ಎಚ್, ಶ್ವೇತ ಕೆ ಆರ್, ಅಂಭಿಕಾ, ಶೈಲಾ ಕೆ ಎಲ್, ಶಿಲ್ಪ ಸೇರಿದಂತೆ ಇತರರು ಇದ್ದರು‌