ನ.30 ರಂದು ಹಾವೇರಿ, ಹಿರೇಕೆರೂರಿನಲ್ಲಿ ಗ್ರಾಮ ಸ್ವರಾಜ್ ಸಮಾವೇಶ

Share

ಹಾವೇರಿ: ಭಾರತೀಯ ಜನತಾ ಪಕ್ಷದ ಅಭಿವೃದ್ಧಿ ಪರ ಚಿಂತನೆ ಹಾಗಾ ಸಾಮಾನ್ಯ ಕಾರ್ಯಕರ್ತನಿಗೆ ನೀಡುವ ಅವಕಾಶದಿಂದ ಹಲವಾರು ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದೆ. ಇದೇ ಮಾದರಿಯಲ್ಲಿ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಯಲಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್ ಹೇಳಿದರು.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಾಮಾನ್ಯ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವ ಪಕ್ಷವಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷ, ಗ್ರಾಮೀಣ ಮಟ್ಟದಲ್ಲಿರುವ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವುದಕ್ಕೆ ರಾಜ್ಯ ನಾಯಕರು, ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ನಾಯಕರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಗೆ ಗೆಲುವಿನ ಕಾರ್ಯತಂತ್ರ ಹೆಣೆಯುವ ಸಲುವಾಗಿ ಡಿ. 30ರಂದು ಹಾವೇರಿ ಹಾಗೂ ಹಿರೇಕೆರೂರಿನಲ್ಲಿ ಗ್ರಾಮ ಸ್ವರಾಜ್ ಸಮಾವೇಶ ಆಯೋಜಿಸಲಾಗಿದೆ. ಹಿರೇಕೆರೂರ, ರಾಣೆಬೆನ್ನೂರ ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರಗಳು ಒಳಗೊಂಡ ಸಮಾವೇಶ ಹಿರೇಕೆರೂರಿನಲ್ಲಿ ಡಿ. 30 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಹಾಗೂ ಹಾವೇರಿ, ಹಾನಗಲ್, ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರಗಳು ಒಳಗೊಂಡ ಸಮಾವೇಶ ಡಿ. 30 ರಂದು ಮಧ್ಯಾಹ್ನ 12:30 ಕ್ಕೆ ಹಾವೇರಿ ಶಿವಬಸವ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದೆ ಎಂದರು.

ಸಮಾವೇಶದಲ್ಲಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು ಭಾವಹಿಸಲಿದ್ದು, ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಗಿರೀಶ ತುಪ್ಪದ, ಪ್ರಭು ಹಿಟ್ನಳ್ಳಿ, ಪ್ರದೀಪ ಮುಳ್ಳೂರ, ಪವನ ಮಲ್ಲಾಡದ, ಕಿರಣ ಕೋಣನವರ, ಶಶಿ ಹೊಸಳ್ಳಿ ಸೇರಿದಂತೆ ಇತರರು ಇದ್ದರು‌.