ಬುದ್ಧಿಮಾಂದ್ಯ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣ: ಆರೋಪಿ ಬಂಧನ

Share

ಹಾವೇರಿ: ನಗರದಲ್ಲಿ ಡಿ.7 ರಂದು ಮಧ್ಯರಾತ್ರಿ ಬುದ್ಧಿಮಾಂದ್ಯ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಶನಿವಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತಸ್ಲಿಮ್‌ ಮೌಲಸಾಬ್‌ ಶೆರೆವಾಡ (23) ಬಂಧಿತ ಆರೋಪಿ. ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದವನಾದ ಈತ ವೃತ್ತಿಯಿಂದ ಆಟೊ ಚಾಲಕನಾಗಿದ್ದಾನೆ ಎಂದು ತಿಳಿಸಿದರು.

ಘಟನೆಯ ಸಂದರ್ಭ ಸಂತ್ರಸ್ತ ಮಹಿಳೆ ಕೂಗಿಕೊಂಡ ಧ್ವನಿಯನ್ನು ಕೇಳಿದ್ದ ಮಹಿಳೆಯೊಬ್ಬರು, ಬೆಳಿಗ್ಗೆ ಘಟನಾ ಸ್ಥಳದ ಕಾಂಪ್ಲೆಕ್ಸ್‌ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಆ ಮಾಲೀಕರು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ವೀಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಇದರ ಆಧಾರದ ಮೇಲೆ ಆರೋಪಿಯನ್ನು ಶೀಘ್ರ ಬಂಧಿಸಲು ಸಾಧ್ಯವಾಯಿತು’ ಎಂದು ಹೇಳಿದರು.

ತನಿಖಾಧಿಕಾರಿ ಟಿ.ಮಂಜಣ್ಣ ಮತ್ತು ಇನ್‌ಸ್ಪೆಕ್ಟರ್‌ ಪ್ರಹ್ಲಾದ ಚನ್ನಗಿರಿಯವರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿ, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಆರೋಪಿಯನ್ನು ಬಂಧಿಸಿದ್ದೇವೆ. ಸಂತ್ರಸ್ತ ಮಹಿಳೆಯು ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ ಎಂ.ಸಂತೋಷ ಹಾಗೂ ಸಿಬ್ಬಂದಿ ಇದ್ದರು.