ಪೋಲಿಸರ ವೇತನ ಹೆಚ್ಚಳ ತಾರತಮ್ಯ ಸರಿಪಡಿಸಿ: ಶಶಿಧರ ವೇಣುಗೋಪಾಲ

Share

ಹಾವೇರಿ: ರಾಘವೇಂದ್ರ ಔರಾದಕರ ಸಮಿತಿಯ ಶಿಫಾರಸ್ಸಿನ ಬೆಳಕಿನಲ್ಲಿ ಜಾರಿಗೆ ತರಲಾದ ಪೋಲೀಸರ ವೇತನ ನಿಗಧಿಕರದಲ್ಲಿ ಆದ ವೇತನ ತಾರತಮ್ಯ ಕೂಡಲೇ ಸರಿಪಡಿಸುವಂತೆ ಅಖಿಲ ಕರ್ನಾಟಕ ಪೋಲಿಸ್ ಮಹಾಸಭಾದ ಅಧ್ಯಕ್ಷ ಶಶಿಧರ ವೇಣುಗೋಪಾಲ ರಾಜ್ಯ ಸರಕಾರವನ್ನು ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಘವೇಂದ್ರ ಔರಾದಕರ ಸಮಿತಿಯ ವರದಿಯನ್ನು ಜಾರಿ ಗೊಂದಲದ ಗೂಡಾಗಿದ್ದು, ಪೋಲಿಸರ ಸೇವಾ ವೇತನ ತಾರತಮ್ಯ ಹೆಚ್ಚಿಸಿದೆ. ಕಳೆದ ಏಂಟು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಕಾನ್ ಸ್ಟೇಬಲ್‍ಗೂ ಈ ವರ್ಷ ಕರ್ತವ್ಯಕ್ಕೆ ಹಾಜರಾದವರಿಗೂ ಒಂದೇ ಮೂಲ ವೇತನ ನಿಗಧಿ ಮಾಡುವ ಮೂಲಕ ರಾಜ್ಯ ಸರಕಾರ ಸೇವಾ ಹಿರಿತನದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ರಾಜ್ಯ ಪೋಲಿಸರ ವೇತನ ಬಹಳ ಕಡಿಮೆಯಿದ್ದು, ದೇಶದಲ್ಲಿ ಏಂಟನೇ ಸ್ಥಾನದಲ್ಲಿದೆ. ತೆಲಂಗಾಣ ಮೊದಲ ಸ್ಥಾನದಲ್ಲಿದೆ. ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸಬೇಕಾದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳಿ ಇಲಾಖೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತ ಪಡಿಸಿದರು.

2016 ರಲ್ಲಿ ಅಂದಿನ ಉಪಮುಖ್ಯಮಂತ್ರಿ ಪರಮೇಶ್ವರ ಅವರು ಪೋಲಿಸರ ವೇತನವನ್ನು ಶೇ.30 ರಿಂದ 35% ನಷ್ಟು ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೂ ಅದು ಜಾರಿಗೆ ಬಂದಿಲ್ಲ. ಅಲ್ಲದೆ ಪೋಲಿಸರು ಸ್ವತಂತ್ರವಾಗಿ ಕೆಲಸ ಮಾಡಲು ಇಂದಿನ ರಾಜಕಾರಣಿಗಳು ಬಿಡುತ್ತಿಲ್ಲ. ಬದಲಾಗಿ ನಮ್ಮನ್ನು ಬಹಳ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂದರು.

ಪೋಲಿಸರ ವರ್ಗಾವಣೆ ಪಾರದರ್ಶಕವಾಗಿರಬೇಕು ಹಾಗೂ ಯಾವುದೇ ರಾಜಕೀಯ ವ್ಯಕ್ತಿಯ ಹಸ್ತಕ್ಷೇಪವಿರಬಾರದು ಎಂದು ಸುಪ್ರೀಂ ಕೋರ್ಟ ಆದೇಶ ನೀಡಿದೆ. ಆದರೆ ಇಂದು ಆದೇಶವನ್ನು ಗಾಳಿಗೆ ತೂರಿ ವರ್ಗಾವಣೆಯನ್ನು ಒಂದು ದಂದೆಯಾಗಿ ರಾಜಕಾರಣಿಗಳು ಮಾಡಿಕೊಂಡಿದ್ದಾರೆ. ನಾವು ಮೊದಲಿನಿಂದಲೂ ರಾಜಕೀಯ ಪ್ರೇರಿತ ಪೋಲಿಸ್ ವರ್ಗಾವಣೆಯನ್ನು ಖಂಡಿಸುತ್ತಾ ಬಂದಿದ್ದೇವೆ. ಕೂಡಲೇ ರಾಜ್ಯ ಸರಕಾರ ಪೋಲಿಸ್ ವೇತನ ತಾರತಮ್ಯವನ್ನು ಸರಿಪಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ದೀಪಕ ಗಂಟಿಸಿದ್ದಣ್ಣನವರ, ಹನುಮಂತಪ್ಪ ಕೆರೂರ, ನಿಂಗಪ್ಪ ಕಡೂರ, ಎಚ್.ಎಂ. ತಾಳಿಕೋಟಿ ಹಾಗೂ ಬೀರಪ್ಪ ಮುದಕ್ಕಣ್ಣವರ ಇದ್ದರು.