ನೆರೆ ಪರಿಹಾರ ತಾರತಮ್ಯ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ

Share

ಹಾವೇರಿ: ತಾಲೂಕಿನ ದೇವಗೇರಿ ಗ್ರಾಮದಲ್ಲಿ ನೆರೆ ಸಂತ್ರಸ್ಥರಿಗೆ ಪರಿಹಾರವನ್ನು ನೀಡದೆ ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಗ್ರಾಮಸ್ಥರು ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಾವೇರಿ ತಾಲೂಕ ಘಟಕದ ಅಧ್ಯಕ್ಷ ರಾಜೇಸಾಬ ತರಲಗಟ್ಟಾ, ದೇವಗೇರಿ ಗ್ರಾಮದಲ್ಲಿ ನೆರೆ ಸಂತ್ರಸ್ಥ ಫಲಾನುಭವಿಗಳಿಗೆ ಸರಕಾರ ಬಿಡುಗಡೆ ಮಾಡಿರುವ ಪರಿಹಾರ ಸರಿಯಾಗಿ ಹಂಚಿಕೆಯಾಗಿಲ್ಲ. ಬದಲಾಗಿ ಶ್ರೀಮಂತರಿಗೆ ಹಾಗೂ ರಾಜಕಾರಣ ಮಾಡುವ ಗ್ರಾಮದ ದೊಡ್ಡ ವ್ಯಕ್ತಿಗಳಿಗೆ ಪರಿಹಾರ ಹಂಚಿಕಯಾಗಿದೆ. ಈ ಕುರಿತು ಗ್ರಾಮ ಪಂಚಾಯತಿ ಎದುರು ಡಿ.25 ರಂದು ಪ್ರತಿಭಟನೆ ನಡೆಸಿದಾಗ ತಹಶೀಲ್ದಾರ ಅವರು ಸ್ಥಳಕ್ಕೆ ಆಗಮಿಸಿ ಬೇರೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಯಿಂದ ಮರು ಪರಿಶೀಲನೆ ಮಾಡಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇಂದಿಗೂ ಆ ಕೆಲಸ ಪ್ರಾರಂಭಿಸಿಲ್ಲ ಎಂದರು.

ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳು ನೆರೆ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದು, ನೆರೆಯಿಂದ ಹಾನಿಯಾದ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡದೇ, ನಿಮ್ಮ ಬಳಿ ಮನೆ ಪಟ್ಟಾ ಹಾಗೂ ಉತಾರ ಇಲ್ಲಾ ಹಾಗಾಗಿ ಪರಿಹಾರ ನೀಡಿಕೆ ಸಾಧ್ಯವಿಲ್ಲ ಎಂದು ಹೇಳುವ ಅವರು ಹಾನಿಯಾಗದ ಗ್ರಾಪಂ ಸದಸ್ಯರ ಹಾಗೂ ಲಂಚ ನೀಡುವವರ ಮನೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ತಮಟೆ ಬಾರಿಸುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ದೇವಗೇರಿ ಗ್ರಾಮಸ್ಥರಾದ ಪ್ರಕಾಶ ಕಲ್ಲಾದೇವರ, ಗಂಗವ್ವ, ಬೀರವ್ವ, ನಿಂಗಪ್ಪ ಪೂಜಾರ, ಬೀರಪ್ಪ, ಮಂಜು ಸೇರಿದಂತೆ ಇತರರು ಇದ್ದರು.