ಕವಿ ಬಿಸರಳ್ಳಿ ಮೇಲಿನ ಪ್ರಕರಣ ವಾಪಸ್ ಪಡೆಯಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

Share

ಹಾವೇರಿ: ಕೊಪ್ಪಳ ಜಿಲ್ಲೆಯ ಪತ್ರಕರ್ತ ಹಾಗೂ ಕವಿ ಸಿರಾಜ್ ಬಿಸರಳ್ಳಿ ಅವರನ್ನು ತಕ್ಷಣ ಬಿಡುಗಡೆ ಮಾಡುವುದರೊಂದಿಗೆ ಅವರ ಮೇಲಿನ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಬುಧವಾರ ಹಾವೇರಿಯ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಡಿವೈಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಈ ಹಿಂದೆ ಕವಿ ಸಿರಾಜ್ ಬಿಸರಳ್ಳಿ ಮತ್ತು ರಾಜ್ ಬಕ್ಷ್ ರನ್ನು ಕವಿತೆ ವಾಚಿಸಿದ್ದರೆಂದು ಪ್ರಕರಣ ದಾಖಲಿಸಿದ್ದನ್ನು ರಾಜ್ಯದಾದ್ಯಂತ ಖಂಡಿಸಲಾಗಿತ್ತು. ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೂಡಾ ಈ ವಿಷಯ ಪ್ರಸ್ತಾಪವಾಗಿ ಖಂಡಿಸಲ್ಪಟ್ಟಿತ್ತು. ಸಿರಾಜ್ ಬಿಸರಳ್ಳಿಯವರ ಕವನಕ್ಕೆ ಬೇಡಿ ತೊಡಿಸ ಹೊರಟ ಸರಕಾರದ ದುರ್ವರ್ತನೆಗೆ ಸವಾಲೆಸೆದು ತೆಲುಗು ತಮಿಳು ಸೇರಿದಂತೆ ಹತ್ತಾರು ಭಾಷೆಗಳಲ್ಲಿ ಅವರ ಕವನ ಭಾಷಾಂತರಗೊಂಡಿತು. ಕವನ ಸಂಕಲನವೂ ಹೊರಬಿದ್ದಿತು.

ಈ ಮಧ್ಯೆ ಸರಕಾರವನ್ನು ಅದರ ನೀತಿಯನ್ನು ಟೀಕಿಸುವುದು ದೇಶದ್ರೋಹವಾಗುವುದಿಲ್ಲ ಎಂದು ಮುಂಬೈ ಹೈಕೋರ್ಟ್ ಇನ್ನೊಂದು ಪ್ರಕರಣದಲ್ಲಿ ತೀರ್ಪು ಕೊಟ್ಟಿತು. ಆದರೆ ಕರ್ನಾಟಕ ಸರ್ಕಾರಕ್ಕೆ ಇವಾವುದೂ ಮುಟ್ಟಲಿಲ್ಲ . ದಾಖಲಾದ ಪ್ರಕರಣದ ವಿಚಾರಣೆಗೆ ಮಂಗಳವಾರ ನ್ಯಾಯಾಲಯಕ್ಕೆ ಹೋದ ಪತ್ರಕರ್ತ, ಕವಿ ಸಿರಾಜ್ ಬಿಸರಳ್ಳಿ ಮತ್ತು ರಾಜ್ ಭಕ್ಷ್ ರನ್ನು ಬಂಧಿಸಲಾಗಿದೆ. ಇದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ, ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಡಿಎಸ್‌ಎಸ್ ಮುಖಂಡ ಹೊನ್ನೇಶ್ವರ ತಗಡಿನಮನಿ, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಎಸ್‌ಎಫ್‌ಐ ಸಹಕಾರ್ಯದರ್ಶಿ ಬಸವರಾಜ ಭೋವಿ, ವಿದ್ಯಾರ್ಥಿ ಮುಖಂಡ ಸಿದ್ದಲಿಗೇಶ ಮರೆಮ್ಮನವರ ಸೇರಿದಂತೆ ಅನೇಕರು ಇದ್ದರು.