ಆಡಳಿತ- ವಿರೋಧ ಪಕ್ಷ ಸದಸ್ಯರ ಮಧ್ಯೆ ವಾಗ್ವಾನ, ಗೊಂದಲದ ಗೂಡಾದ ಸಾಮಾನ್ಯ ಸಭೆ

Share

ಹಾವೇರಿ: ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯು ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಆರೋಪ – ಪ್ರತ್ಯಾರೋಪಗಳಿಂದ ಗೊಂದಲದ ಗೂಡಾದ ಘಟನೆ ಸೋಮವಾರ ಜರುಗಿತು.

ಸೋಮವಾರ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಹಾಗೂ ಪ್ರಮುಖ ವಿಷಯಗಳನ್ನು ಚರ್ಚಿಸಲು ಕರೆಯಲಾಗಿದ್ದ, ಸಭೆಗೆ ಸರ್ವ ಸದಸ್ಯರು ಆಗಮಿಸಿದ್ದರು. ಸಭೆಯಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವದರ ಜತೆಗೆ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆದು ನಿರ್ಣಯ ತೆಗೆದುಕೊಳ್ಳಬೇಕಿತ್ತು. ಆದರೆ, ಆಡಳಿತ ಹಾಗ ವಿಪಕ್ಷಗಳ ಸದಸ್ಯರ ಪ್ರತಿಷ್ಠೆಯು, ಅಮೂಲ್ಯ ಸಮಯವನ್ನು ನುಂಗಿ ಹಾಕಿತು.

ನ.24ರಂದು ನಡೆದ ಸಾಮಾನ್ಯ ಸಭೆ ಅಪೂರ್ಣಗೊಂಡಿದೆ. ಹಾಗಾಗಿ ಇದು ಮುಂದುವರಿದ ಸಭೆ ಎಂದು ಕಾಂಗ್ರೆಸ್ ಸದಸ್ಯರ ವಾದವಾದರೆ, ಸಭೆ ಮುಂದೂಡಿದ್ದರಿಂದ ಮತ್ತೆ ನೋಟಿಸ್ ಜಾರಿ ಮಾಡಿ ಹೊಸದಾಗಿ ಸಾಮಾನ್ಯ ಸಭೆ ನಡೆಸಬೇಕು ಎಂಬುದು ಬಿಜೆಪಿ ಸದಸ್ಯರ ವಾದವಾಗಿತ್ತು.

ಅ.31ರಂದು ಹಾವೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಚುನಾವಣೆಯಾಗಿ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯನ್ನು ನಗರಸಭೆಯ ಪೌರಾಯುಕ್ತರು ನ.24ರಂದು ಕರೆದಿದ್ದರು. ಆದರೆ ಅವರೇ ಕರೆದಿದ್ದ ಸಭೆಯಿಂದ ಪೌರಾಯುಕ್ತರು ಹೊರ ನಡೆದ ಕಾರಣ, ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಜೀವಕುಮಾರ ನೀರಲಗಿ ಅವರು, ಸದಸ್ಯರು ವೇದಿಕೆಯ ಮುಂಭಾಗಕ್ಕೆ ಬರದೇ ತಮ್ಮ ಆಸನದ ಬಳಿಯಿಂದಲೇ ಮಾತನಾಡುವಂತೆ ಹಲವು ಬಾರಿ ಸದಸ್ಯರಿಗೆ ಸೂಚಿಸಿದರು. ಆದರೆ, ಸದಸ್ಯರು ಕೂಗಾಡುತ್ತಾ ಕಾಲಹರಣ ಮಾಡಿದರು.

ಶಾಸಕ ನೆಹರು ಓಲೇಕಾರ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಲಿ ಎಂದು ಸಲಹೆ ನೀಡಿದರು. ಶಾಸಕರು ಗದ್ದಲವನ್ನು ತಿಳಿಗೊಳಿಸುವ ವೇಳೆಗೆ ಸಮಯ ಮೀರಿದ ಕಾರಣ ಊಟದ ವಿರಾಮ ಘೋಷಿಸಲಾಯಿತು. ಊಟದ ನಂತರ ಸಭೆ ನಡೆಸಲು ಮತ್ತೆ ಹೊಸದಾಗಿ ಸಭೆ ನಡೆಸುವ ಬಗ್ಗೆ ನೋಟಿಸ್ ಜಾರಿಗೊಳಿಸಲಾಯಿತು.

ಸಭೆಯಲ್ಲಿ ನಗರಸಭಾ ಸದಸ್ಯರಾದ ಇಮಾಮ ಜಾಫರ್‌ಖಾನ್‌ ಪಠಾಣ, ನಿಂಗರಾಜ ಶಿವಣ್ಣನವರ, ಗಣೇಶ ಬಿಷ್ಟಣ್ಣನವರ, ಪೀರ್‌ಸಾಬ್‌ ಚೋಪದಾರ, ಗಿರೀಶ ತುಪ್ಪದ, ಬಸವರಾಜ ಬೆಳವಡಿ, ಬಾಬುಸಾಬ ಮೋಮಿನಗಾರ, ಶಿವಯೋಗಿ ಹುಲಿಕಂತಿಮಠ, ರತ್ನಾ ಭೀಮಕ್ಕನವರ, ಶಶಿಕಲಾ ಮಾಳಗಿ, ಸಚಿನ್ ಡಂಬಳ, ಮಲ್ಲಿಕಾರ್ಜುನ ಸಾತೇನಹಳ್ಳಿ ಮುಂತಾದವರು ಹಾಜರಿದ್ದರು.

ಪೌರಾಯುಕ್ತ ಪರಶುರಾಮ ಚಲವಾದಿ, ಉಪಾಧ್ಯಕ್ಷೆ ಉಪಾಧ್ಯಕ್ಷೆ ಜಹಿರಾಬಿ ಜಮಾದಾರ ಗದ್ದಲ-ಗಲಾಟೆ ನಡೆದ ವೇಳೆ ಮೌನಕ್ಕೆ ಶರಣರಾಗಿದ್ದರು.