ಅನುದಾನ ಬಳಕೆಮಾಡದಿದ್ದರೆ ಮೊಕದ್ದಮೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ

Share

ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಇಲಾಖಾವಾರು ಬಿಡುಗಡೆಯಾದ ಅನುದಾನ ಕಾಲಮಿತಿಯೊಳಗೆ ವೆಚ್ಚ ಮಾಡದ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧಿನಿಯಮದಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆಯಡಿ ವಿವಿಧ ಇಲಾಖೆಗೆ ಹಂಚಿಕೆಯಾದ ಅನುದಾನದ ಬಳಕೆ, ಕಾರ್ಯಕ್ರಮದ ಅನುಷ್ಠಾನ ಕುರಿತಂತೆ ಡಿಸೆಂಬರ್ ಅಂತ್ಯದವರೆಗೆ ತ್ರೈಮಾಸಿಕ ಸಭೆ ನಡೆಸಿದ ಅವರು, ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಸಕಾರಣವಿಲ್ಲದೆ ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿ ಅನುದಾನ ಉಳಿಸಿಕೊಂಡ ಅಧಿಕಾರಿಗಳ ಮೇಲೆ ನಾನೇ ಖುದ್ದಾಗಿ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.

ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ಹಂತದಲ್ಲಿದ್ದೇವೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿ ಜಿಲ್ಲೆಗೆ ಬಿಡುಗಡೆಯಾದ ಅನುದಾನ ನೂರಕ್ಕೆ ನೂರರಷ್ಟು ವೆಚ್ಚಮಾಡಬೇಕು. ನಿಯಮಾನುಸಾರ ಅರ್ಹ ಫಲಾನುಭವಿಗಳ ಯೋಜನೆ ತಲುಪಬೇಕು. ಕಾಮಗಾರಿಗಳು ಕೈಗೊಂಡಿದ್ದರೆ ಗುಣಮಟ್ಟದ ಕಾಮಗಾರಿಗಳು ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.

ಪರಿಶಿಷ್ಟರ ಅನುದಾನದಡಿ ಮಂಜೂರಾದ ಮೂಲಸೌಲಭ್ಯಗಳು, ಕಾಮಗಾರಿಗಳು ಅದೇ ಜನಾಂಗಕ್ಕೆ ತಲುಪಬೇಕು. ಅದೇ ಜನಾಂಗದ ಬಡವಾಣೆಗಳಲ್ಲಿ ಅನುಷ್ಠಾನಗೊಳ್ಳಬೇಕು. ಯಾವುದೇ ಕಾರಣಕ್ಕೂ ಈ ಜನಾಂಗದ ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನ ಬೇರೆಕಡೆ ಬಳಕೆಯಾಗಬಾರದು. ಈ ಕುರಿತಂತೆ ಗರಿಷ್ಠ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಸಕ್ತ ಸಾಲಿನ ಆರ್ಥಿಕ ವರ್ಷಾಂತ್ಯದಲ್ಲಿರುವ ನಾವು ನಿಗಧಿತ ಅವಧಿಯಲ್ಲಿ ಬಿಡುಗಡೆ ಅನುದಾನವನ್ನು ಬಳಕೆಮಾಡಿಕೊಳ್ಳಬೇಕು. ಈ ಹಂತದಲ್ಲಿ ಯಾವುದೇ ಕಾರ್ಯಕ್ರಮಗಳ ಬದಲಾವಣೆ, ಏಜೆನ್ಸಿಗಳ ಬದಲಾವಣೆ ಮಾಡಬಾರದು. ಈಗಾಗಲೇ ಕಾಮಗಾರಿ ವಹಿಸಿರುವ ಏಜೆನ್ಸಿಗಳ ಮೂಲಕವೇ ಕೆಲಸಮಾಡಿಸಬೇಕು. ಕೆಲಸವಹಿಸಿಕೊಂಡ ಏಜೆನ್ಸಿಗಳ ಅನುಷ್ಠಾನದಲ್ಲಿ ವಿಳಂಬಮಾಡಿದರೆ ಅಂತಹವರ ಮೇಲೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ವಿಶೇಷ ಅನುದಾನದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳು ಈಗಾಗಲೇ ಆಯ್ಕೆಗೊಂಡಿದ್ದರೆ ತಕ್ಷಣವೇ ಅವರ ಖಾತೆಗೆ ಅನುದಾನ ಜಮಾಮಾಡಬೇಕು. ಇನ್ನೂ ಆಯ್ಕೆ ಪ್ರಕ್ರಿಯೆಪೂರ್ಣಗೊಳಿಸ ಅಧಿಕಾರಿಗಳು ತ್ವರಿತವಾಗಿ ಮಾರ್ಗಸೂಚಿಯಂತೆ ಫಲಾನುಭವಿಗಳನ್ನು ಆಯ್ಕೆಮಾಡಲು ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಮತ್ತು ಸಣ್ಣ ಉದ್ಯಮ ಇಲಾಖೆಗೆ ಎಸ್.ಇ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಹಾಗೂ ಬಳಕೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸದರಿ ಅನುದಾನದಡಿ ಕೇವಲ ಹೊಲಿಗೆ ಯಂತ್ರ ನೀಡುವ ಏಕತರಹದ ಕಾರ್ಯಕ್ರಮಗಳನ್ನು ರೂಪಿಸುತ್ತ ಬದಲಾಗಿದೆ. ನಿರಂತರವಾಗಿ ಒಂದೇತರದ ಕಾರ್ಯಕ್ರಮ ಅನುಷ್ಠಾನಗೊಳಿಸುವ ಬದಲು ಈ ಜನಾಂಗದ ಬೇರೆ ಬೇರೆ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಎಂದು ಸೂಚನೆ ನೀಡಿದರು.

ಪರಿಶಿಷ್ಟ ವರ್ಗ ಮತ್ತು ವರ್ಗಗಳಿಗೆ ತೋಟಗಾರಿಕೆ ಸೌಲಭ್ಯಗಳು, ಮೀನುಗಾರಿಕೆ ಇಲಾಖೆ ಸೌಲಭ್ಯಗಳು, ಈ ಜನಾಂಗದ ಕಲಾವಿದರಿಗೆ ಅನುಷ್ಠಾನಗೊಳಿಸಿರುವ ಕಾರ್ಯಕ್ರಮ, ಮಹಿಳಾಮತ್ತು ಮಕ್ಕಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳು, ನಗರದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಾಲೋನಿಗಳಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳು, ಗಂಗಾ ಕಲ್ಯಾಣ ವಿದ್ಯುತ್ ಸಂಪರ್ಕ, ಕಾರ್ಮಿಕರಿಗೆ ಸೌಲಭ್ಯ, ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ವಿವಿಧ 31 ಇಲಾಖೆಗಳ ಪ್ರಗತಿಯನ್ನು ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಸಭೆಗೆ ಗೈರು ಹಾಜರಾದ ತುಂಗಾ ಮೇಲ್ದಂಡೆ ಯೋಜನೆಯ ಅಭಿಯಂತರರು, ಪಿ.ಡಬ್ಲ್ಯೂಡಿ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಜಾರಿಮಾಡಲು ಸೂಚನೆ ನೀಡಿದರು.