ಸಂತ್ರಸ್ತರ ನೆರವಿಗೆ ಮುಂದಾದ ಸ್ನೇಹ ಬಳಗ : ಯುವಕರ ಸಹಕಾರಕ್ಕೆ ಸಲಾಂ ಹೇಳಿದ ಬಸವಶಾಂತಲಿಂಗ ಶ್ರೀ

Share

ಹಾವೇರಿ: ಮಳೆರಾಯನ ಅಬ್ಬರಕ್ಕೆ ತತ್ತರಿಸಿ, ಆಶ್ರಯ ಕಳೆದುಕೊಂಡು ಪರಿಹಾರ ಕೆಂದ್ರ ಸೇರಿರುವ ಜಿಲ್ಲೆಯ ಜನರ ಸಹಾಯಕ್ಕಾಗಿ ಅಗತ್ಯ ಸಾಮಾಗ್ರಿಗಳನ್ನು ನೀಡಲು ಮನವಿ ಮಾಡಿದ್ದ ಹೊಸಮಠ ಬಸವಶಾಂತಲಿಂಗ ಶ್ರೀಗಳ ಮನವಿಗೆ ಸ್ಪಂದಿಸಿದ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಸ್ವಾಮಿ ವಿವೇಕಾನಂದ ಸ್ನೇಹ ಬಳಗ ಸಂತ್ರಸ್ತರೊಂದಿಗೆ ನಾವಿದ್ದೇವೆ’ ಎಂಬ ಸಂದೇಶ ಸಾರಿದ್ದಾರೆ.

ನೆರವು ನೀಡಲು ಗ್ರಾಮದ ಜನರಿಂದ ಅಕ್ಕಿ ಹಾಗೂ ಸೀರೆಗಳನ್ನು ಸಂಗ್ರಹಿಸಿ ಹೊಸಮಠಕ್ಕೆ ಆಗಮಿಸಿದ ಯುವಕರ ತಂಡ ಶ್ರೀಗಳ ಸಲಹೆಯಂತೆ ಬಸವ ಕೇಂದ್ರ ಹೊಸಮಠ ಸಹಕಾರದೊಂದಿಗೆ ಸೋಮವಾರ ಅಕ್ಕಿ, ಸೀರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡ ಸುಮಾರು 200 ಪ್ಯಾಕೆಟ್ ಗಳನ್ನು ತಯಾರು ಮಾಡಿದರು.

ಮಂಗಳವಾರ ಯುವಕರ ತಂಡ ಬಸವ ಕೇಂದ್ರ ಹೊಸಮಠ ಸಹಯೋಗದೊಂದಿಗೆ ಶ್ರೀಗಳ ನೇತೃತ್ವದಲ್ಲಿ ಸವಣೂರು ತಾಲೂಕಿನ ಮೇಳಾಗಟ್ಟಿ, ಮನ್ನಂಗಿ, ಅಲಸೂರು ಹಾಗೂ ಪುಲಿಮೇಳಿಹಳ್ಳಿ ಗ್ರಾಮಗಳ ಗಂಜಿಕೇಂದ್ರಕ್ಕೆ ತೆರಳಿ ಅಗತ್ಯ ಸಾಮಗ್ರಿಗಳ ಪ್ಯಾಕೆಟ್ ವಿತರಣೆ ಮಾಡಿದರು.

ಯುವಕರ ಸೇವಾ ಮನೋಭಾವ, ಸಹಕಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಮಾತನಾಡಿದ ಶ್ರೀಗಳು ಸಂತ್ರಸ್ತ ಜನರಿಗೆ ಶ್ರೀಮಠ ಸದಾ ನೆರವು ನೀಡುತ್ತದೆ. ಯಾರು ಭಯ ಪಡುವ ಅಗತ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಸ್ನೇಹ ಸಂಘದ ಅಧ್ಯಕ್ಷ ಈರಣ್ಣ ಸದಸ್ಯರಾದ ಸಂದೀಪ್, ಸಂತೋಷ ಸೇರಿದಂತೆ ಶ್ರೀ ಮಠದ ಭಕ್ತರು ಇದ್ದರು.